ಶಿವಮೊಗ್ಗ: ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬದ ಸಂದರ್ಭದಲ್ಲಿ ಜಿಲ್ಲೆಯಾಧ್ಯಂತ ಡಿಜೆ ಸಿಸ್ಟಂ ಬಳಕೆ ಮಾಡದಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಖಡಕ್ ಆದೇಶ ಹೊರಡಿಸಿದ್ದಾರೆ.
ಈ ಕುರಿತಂತೆ ಆದೇಶ ಹೊರಡಿಸಿರುವಂತ ಅವರು, ಶಿವಮೊಗ್ಗ ಜಿಲ್ಲೆಯಾದ್ಯಂತ ದಿನಾಂಕ: 07,09,2024 ರಂದು ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ನಂತರ, ವಿವಿಧ ದಿನಗಳಂದು ವಿಸರ್ಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದು, ಹಾಗೂ ದಿನಾಂಕ: 16,09,2024 ರಂದು ಜಿಲ್ಲೆಯಾದ್ಯಂತ ಮುಸ್ಲಿಂ ಬಾಂದವರು ಈದ್ ಮಿಲಾದ್ ಹಬ್ಬವನ್ನು ಆಚರಿಸಲಿದ್ದು, ಈ ಸಂಬಂಧ ಗಣೇಶ ಮತ್ತು ಈದ್ ಮಿಲಾದ್ ಹಬ್ಬಗಳ ಆಚರಣೆ ಸಂದರ್ಭಗಳಲ್ಲಿ ಡಿಜೆ ಸಿಸ್ಟಂಗಳನ್ನು ಉಪಯೋಗಿಸುವುದರಿಂದ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ, ವಯಸ್ಕರಿಗೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ತೊಂದರೆಯಾಗುವುದರೊಂದಿಗೆ, ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟಾಗುವ ಸಾಧ್ಯತೆ ಇರುವುದರಿಂದ, ಸಾರ್ವಜನಿಕ ಹಿತದೃಷ್ಟಿಯಿಂದ, ಸೌಹಾರ್ದತೆ & ಶಾಂತಿ ಕಾಪಾಡುವ ಸಲುವಾಗಿ ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಬ್ಬದ ಆಚರಣೆಗಳು ಪೂರ್ಣಗೊಳ್ಳುವವರೆಗೆ ಶಿವಮೊಗ್ಗ ಜಿಲ್ಲೆಯಾದ್ಯಂತ ಡಿಜೆ ಸಿಸ್ಟಂ ನಿಷೇಧಗೊಳಿಸಲು ಆದೇಶ ಹೊರಡಿಸಬೇಕಾಗಿ ಪೋಲೀಸ್ ಅಧೀಕ್ಷಕರು ವಿವರಿಸಿರುವ ಹಿನ್ನಲೆಯಲ್ಲಿ, ಶಿವಮೊಗ್ಗ ಜಿಲ್ಲೆಯಲ್ಲಿ ಸೌಹಾರ್ದತೆ ಮತ್ತು ಶಾಂತಿ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಡಿಜಿ ಸಿಸ್ಟಂಗಳನ್ನು ನಿಷೇಧಗೊಳಿಸಿ ಆದೇಶಿಸುವುದು ಅವಶ್ಯಕವಾಗಿರುತ್ತದೆಂದು ಮನಗಂಡು ಈ ಕೆಳಕಂಡಂತೆ ಆದೇಶ ಹೊರಡಿಸಿದ್ದಾರೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ ಪೊಲೀಸ್ ಕಾಯ್ದೆ-1963 ಕಲಂ 35, 36 ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಗುರುದತ್ತ ಹೆಗಡೆ ಭಾ.ಆ.ಸೇ., ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ, ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ ಆದ ನಾನು ಮುಂಜಾಗ್ರತ ಕ್ರಮವಾಗಿ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ದಿನಾಂಕ: 07,09,2024 ರಿಂದ ಗಣೇಶೋತ್ಸವ ಆಚರಣೆಗಳು ಪೂರ್ಣಗೊಳ್ಳುವವರೆಗೆ ಹಾಗೂ ದಿನಾಂಕ: 16.09 2024 ರಂದು ಈದ್ ಮಿಲಾದ್ ಹಬ್ಬದ ಆಚರಣೆಗಳು ಪೂರ್ಣಗೊಳ್ಳುವವರೆಗೆ ಶಿವಮೊಗ್ಗ ಜಿಲ್ಲೆಯಾದ್ರಿಂತ ಡಿ.ಜೆ ಸಿಸ್ಟಂ ಬಳಕೆ ನಿಷೇಧಗೊಳಿಸಿ ಆದೇಶಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು