ಬೆಂಗಳೂರು: ಇಂದಿನ ಡಿಜಿಟಲ್ ಯುಗದಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಡಿಜಿಟಲ್ ಆಯಾಮದ ಕಲಿಕೆ ಹೆಚ್ಚು ಅಗತ್ಯವಿದೆ. ಇಂತಹ ಕಾರ್ಯಗಳಲ್ಲಿ ತೊಡಗಿರುವ ಶಿಲ್ಪಾ ಫೌಂಡೇಶನ್ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಎಲ್‌ಕೆ ಕ್ಯೂ ಇಂಡಿಯಾ ಮುಖ್ಯಸ್ಥ ಕಿಶೋರ್ ಕುಮಾರ್ ವಾಸುದೇವ ಮೆಚ್ಚುಗೆ ವ್ಯಕ್ತಪಡಿಸಿದರು.
ಶಿಲ್ಪಾ ಫೌಂಡೇಶನ್ ಹಾಗೂ ಎಲ್‌ಕೆ ಕ್ಯೂ ಇಂಡಿಯಾ ಸಹಯೋಗದೊಂದಿಗೆ ಜೆ.ಪಿ. ನಗರದ ಸರ್ಕಾರಿ ಹಿರಿಯ ಪ್ರೌಢಶಾಲೆ ಪುಟ್ಟೇನಹಳ್ಳಿ ಯಲ್ಲಿ ಆಯೋಜಿಸಿದ್ದ ‘ಶಾಲಾ ಅಭಿವೃದ್ಧಿ ಯೋಜನೆ’ ಕಾರ್ಯಕ್ರಮದಲ್ಲಿ ಶಾಲೆಗೆ ಉಚಿತವಾಗಿ ಪೀಠೋಪಕರಣ, ಕ್ರೀಡಾ ಉಪಕರಣಗಳು, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಲಕರಣೆ ನೀಡಿ ಮಾತನಾಡಿದರು.
ಸರ್ಕಾರಿ ಶಾಲೆಗಳ ಮಕ್ಕಳು ಯಾವ ಕ್ಷೇತ್ರದಲ್ಲಿಯೂ ಕಡಿಮೆ ಇಲ್ಲ. ಅವರಿಗೆ ಸರಿಯಾದ ಮಾರ್ಗದರ್ಶನ ಹಾಗೂ ಅಗತ್ಯ ಮೂಲ ಸೌಕರ್ಯ ಕಲ್ಪಿಸಿದರೆ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ, ಅವರಿಗೆ ಅಗತ್ಯ ಸೌಲಭ್ಯ ಒದಗಿಸುವುದು ನಮ್ಮ ಆದ್ಯತೆಯಾಗಲಿ. ಈಗಾಗಲೇ ಎಲ್‌ಕೆ ಕ್ಯೂ ಇಂಡಿಯಾ ಸಾಮಾಜಿಕ ಸಹ ಭಾಗಿತ್ವ ಅಡಿಯಲ್ಲಿ ಶಿಲ್ಪಾ ಫೌಂಡೇಶನ್ ಅಂದಾಜು 15 ಲಕ್ಷ ರೂ.ವೆಚ್ಚದಲ್ಲಿ ಸರ್ಕಾರಿ ಶಾಲೆಗೆ ಮೂಲಸೌಕರ್ಯ ಒದಗಿಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡಲು ಮುಂದಾಗಿರುವುದು ಪ್ರಶಂಸನೀಯ ಎಂದರು.
ಪುಟ್ಟೇನಹಳ್ಳಿ ಶಾಲೆ ಮುಖ್ಯೋಪಾಧ್ಯಾಯರ ಬಿ.ವಿ. ಪ್ರತಿಮಾ, ಶಿಲ್ಪಾ ಫೌಂಡೇಶನ್ ಸಂಸ್ಥೆಯ ಸಂಸ್ಥಾಪಕ ಅಚ್ಯುತ್‌ಗೌಡ, ಜೆ. ಪಿ.ನಗರ ಪೊಲೀಸ್ ಠಾಣಾಧಿಕಾರಿ ರವಿ ಕುಮಾರ್, ಎಲ್‌ಕೆ ಕ್ಯೂ ಇಂಡಿಯಾ ಮಾನವ ಸಂಪನ್ಮೂಲ ನಿರ್ವಾಹಕ ಅವಿನಾಶ್‌ಗೌಡ, ಶಿಲ್ಪಾ ಫೌಂಡೇಶನ್ ಇಎಸ್ ಜಿ ಮುಖ್ಯಸ್ಥ ಡಾ.ಸತೀಶ್ ಬೆಟ್ಟಪ್ಪ, ಶಾಲಾ ಶಿಕ್ಷಕರು ಸೇರಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.