ಕೆಎನ್ಎನ್ಸಿನಿಮಾಡೆಸ್ಕ್: ಸದ್ಯ ಸ್ಯಾಂಡಲ್ ವುಡ್, ಬಾಲಿವುಡ್, ಕಾಲಿವುಡ್, ಮಾಲಿವುಡ್ ಹಾಗು ಟಾಲಿವುಡ್ ನಲ್ಲೂ ಬಿಡುಗಡೆಗೂ ಮೊದಲೇ ನಿರೀಕ್ಷೆ ಹುಟ್ಟು ಹಾಕಿರುವ ಪ್ಯಾನ್ ಇಂಡಿಯಾ ಸಿನೆಮಾ ಬನಾರಸ್. ಈ ಚಿತ್ರ ಇದೇ ನವೆಂಬರ್ 4 ರಂದು ದೇಶಾದ್ಯಂತ ತೆರೆಕಾಣಲಿದೆ. ನಿರ್ದೇಶನದಲ್ಲಿ ಈಗಾಗಲೇ ಮ್ಯಾಜಿಕ್ ಮಾಡಿರುವ ಜಯತೀರ್ಥ ನಿರ್ದೇಶನದ ಬನಾರಸ್ ಚಿತ್ರರಂಗದಲ್ಲೇ ಹೊಸ ದಾಖಲೆಗಳನ್ನು ನಿರ್ಮಿಸುವ ಯಶಸ್ವೀ ಸಿನಿಮಾವಾಗುವ ಲಕ್ಷಣಗಳು ಕಾಣಿಸುತ್ತಿವೆ.
ನವ ನಟ ಝೈದ್ ಖಾನ್ ನಾಯಕನಾಗಿ ನಟಿಸುತ್ತಿರುವ ಚೊಚ್ಚಲ ಸಿನೆಮಾ ಆರಂಭ ದಿಂದಲೂ ಸುದ್ದಿ ಮಾಡುತ್ತಾ ನಿರೀಕ್ಷೆ ಮೂಡಿಸುತ್ತಿದೆ. ಮೋಷನ್ ಪೋಸ್ಟರ್, ಟ್ರೈಲರ್ ಹಾಗೂ ಮಾಯಗಂಗೆ ಹಾಡಿನ ಮೂಲಕ ಪಂಚ ಭಾಷೆಯಲ್ಲೂ ದಾಖಲೆ ನಿರ್ಮಿಸಿರುವ ಬನಾರಸ್ ಝೈದ್ ಗೆ ಹೊಸ ಹುರುಪನ್ನ ತಂದು ಕೊಟ್ಟಿದೆ. ಬನಾರಸ್ ಬಿಡುಗಡೆಯ ಹೊಸ್ತಿಲಿನಲ್ಲಿರುವಾಗಲೇ ಒಂದರ ಹಿಂದೊಂದರಂತೆ ಸಿಹಿ ಸುದ್ದಿಗಳು ರವಾನೆಯಾಗುತ್ತಿವೆ. ಚಿತ್ರ ತಯಾರಾಗಿ, ಪ್ರಚಾರಗೊಂಡು ಉತ್ತಮ ವಿತರಕರ ಕೈ ಸೇರಿ ಸಿನಿಪ್ರಿಯರ ಮುಂದೆ ಬರೋದರಲ್ಲೂ ಗೆಲುವಿನ ಗುಟ್ಟಿದೆ. ಈ ವಿಚಾರದಲ್ಲಿ ಬನಾರಸ್ನದ್ದು ಯಶಸ್ವೀ ಯಾನ. ಯಾಕೆಂದರೆ, ನಾನಾ ಭಾಷೆಗಳಲ್ಲಿ ಈಗಾಗಲೇ ಸೂಪರ್ ಹಿಟ್ ಸಿನಿಮಾಗಳನ್ನು ವಿತರಿಸಿ ಸೈ ಅನ್ನಿಸಿಕೊಂಡಿರುವ ಸಂಸ್ಥೆಗಳೇ ಬನಾರಸ್ ಚಿತ್ರವನ್ನ ವಿತರಿಸುವ ಜವಾಬ್ದಾರಿಯನ್ನ ವಹಿಸಿಕೊಂಡಿವೆ.
ಕನ್ನಡದಲ್ಲಿ ಖ್ಯಾತ ಡಿ ಬೀಟ್ಸ್ ಸಂಸ್ಥೆ, ಮಲೆಯಾಳಂ ನಲ್ಲಿ ಹೆಸರಾಂತ ಮುಲಕುಪ್ಪಡಮ್, ಬಾಲಿವುಡ್ ನಲ್ಲಿ ಪನೋರಮಾ ಸಂಸ್ಥೆ ಹೀಗೆ ಕರ್ನಾಟಕ, ಕೇರಳ ಮತ್ತು ಉತ್ತರ ಭಾರತದ ಬನಾರಸ್ ವಿತರಣಾ ಹಕ್ಕುಗಳು ಖ್ಯಾತ ಸಂಸ್ಥೆಗಳ ಪಾಲಾಗಿವೆ. ಈ ಮೂಲಕ ಆ ರಾಜ್ಯಗಳಲ್ಲಿ ಬನಾರಸ್ ಸುದ್ದಿ ಕೇಂದ್ರದಲ್ಲಿರುವಾಗಲೇ, ತಮಿಳುನಾಡಿನಲ್ಲಿ ಬನಾರಸ್ ಹಂಚುವ ಬಗೆಗೆ ಸಿಹಿ ಸುದ್ದಿಯೊಂದು ಕೇಳಿಬಂದಿದೆ.
ಹೌದು, ತಮಿಳುನಾಡಿನಾದ್ಯಂತ ಬನಾರಸ್ ಅನ್ನು ಹಂಚುವ ಹಕ್ಕನ್ನ ತಮಿಳುನಾಡಿನ ಪ್ರತಿಷ್ಠಿತ ವಿತರಣಾ ಸಂಸ್ಥೆಯಾಗಿರುವ ಶಕ್ತಿ ಫಿಲಂ ಫ್ಯಾಕ್ಟರಿ ವಹಿಸಿಕೊಂಡಿದೆ. ಕಾಲಿವುಡ್ ನಲ್ಲಿ ಇದುವರೆಗೂ ಉತ್ತಮ ಗುಣಮಟ್ಟದ, ವಿತರಿಸಿರುವ ಹೆಗ್ಗಳಿಕೆ ಶಕ್ತಿ ಫಿಲಂ ಫ್ಯಾಕ್ಟರಿಗಿದೆ. ಇದುವರೆಗೂ ಈ ಸಂಸ್ಥೆಯ ಕಡೆಯಿಂದ ತೆರೆಗಂಡ ಅದೆಷ್ಟೋ ಚಿತ್ರಗಳು ಸೂಪರ್ ಹಿಟ್ ಸಾಲಿಗೆ ಸೇರಿವೆ. ಹೀಗಿರುವಾಗ ತಮಿಳಿನಾಡಿನ ಸಿನಿಪ್ರಿಯರ ಗಮನ ಬನಾರಸ್ ಮೇಲೆ ಬಿದ್ದಿದೆ. ಶಕ್ತಿ ಫಿಲ್ಮ್ ಫ್ಯಾಕ್ಟರಿ ತನ್ನ ತೆಕ್ಕೆಗೆ ಬನಾರಸ್ ವಿತರಿಸುವ ಜವಾಬ್ದಾರಿ ವಹಿಸಿಕೊಂಡ ಮೇಲಂತೂ ಈ ಕಾರಣದಿಂದಲೇ ಬನಾರಸ್ ಚಿತ್ರವನ್ನ ಕಣ್ತುಂಬಿಕೊಳ್ಳುವ ಕಾತುರ ಹೆಚ್ಚಿದೆ.
ಇಷ್ಟೆಲ್ಲಾ ಕ್ಯೂರಿಯಾಸಿಟಿ ಹುಟ್ಟು ಹಾಕಿರುವ ಬನಾರಸ್ ನಲ್ಲಿ ಝೈದ್ ಖಾನ್ ಗೆ ನಾಯಕಿಯಾಗಿ ಸೋನಲ್ ಮೊಂತೆರೋ ಬಣ್ಣ ಹಚ್ಚಿದ್ದಾರೆ. ಇನ್ನು ಈ ಚಿತ್ರದಲ್ಲಿ ದೇವರಾಜ್, ಅಚ್ಯುತಕುಮಾರ್, ಸುಜಯ್ ಶಾಸ್ತ್ರಿ, ಸ್ವಪ್ನ ರಾಜ್, ಬರ್ಕತ್ ಆಲಿ, ಚಿರಂತ್, ರೋಹಿತ್ ತಾರಾಗಣ ಇದೆ. ಅಜನೀಶ್ ಲೋಕನಾಥ್ ಸಂಗೀತ, ಅದ್ವೈತ ಗುರುಮೂರ್ತಿ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ರಘು ನಿಡವಳ್ಳಿ ಸಂಭಾಷಣೆ ಚಿತ್ರಕ್ಕಿದೆ. ನ್ಯಾಷನಲ್ ಖಾನ್ಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಿಲಕ್ ರಾಜ್ ಬಲ್ಲಾಳ್ ನಿರ್ಮಿಸಿರುವ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಇದೇ ನವೆಂಬರ್ 4ಕ್ಕೆ ದೇಶಾದ್ಯಂತ ಪಂಚ ಭಾಷೆಗಳಲ್ಲಿ ತೆರೆಕಾಣಲಿದೆ.