ಶಿವಮೊಗ್ಗ: ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಮಂಗಗಳ ಸರಣಿ ಸಾವುಗಳು ಸಂಭವಿಸಿರೋದಾಗಿ ಆರೋಗ್ಯ ಇಲಾಖೆಯ ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಹೀಗಾಗಿ ತಾಲ್ಲೂಕಿನಲ್ಲಿ ಮತ್ತೆ ಮಂಗನ ಕಾಯಿಲೆಯ ಆಂತಕ ಹೆಚ್ಚಾಗಿದೆ. ಮಂಗನ ಕಾಯಿಲೆ ಭೀತಿ ಮತ್ತೆ ಸಾಗರ ತಾಲ್ಲೂಕಿನಲ್ಲಿ ಎದುರಾಗಿರುವ ಪರಿಣಾಮ ಜನರನ್ನು ಆತಂಕಕ್ಕೆ ದೂಡುವಂತೆ ಆಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ಕಳೆದ ಕೆಲ ತಿಂಗಳಿನಿಂದ ಮಂಗಗಳು ನಿರಂತರವಾಗಿ ಸಾವನ್ನಪ್ಪುತ್ತಿರುವುದಾಗಿ ತಿಳಿದು ಬಂದಿದೆ. ಸಾಗರ ತಾಲ್ಲೂಕಿನ ಹೆಗ್ಗೂಡು ಸಮೀಪದ ಮಾವಿನ ಸರದಲ್ಲಿ ಎರಡು, ಆವಿನಹಳ್ಳಿ ವ್ಯಾಪ್ತಿಯಲ್ಲಿ ಐದು, ಹೆಡ್ಜಿಗಳೆ ಮನೆ, ಆಡೂರು, ಸುಳುಗೋಡು ಗ್ರಾಮದಲ್ಲಿ ತಲಾ ಒಂದೊಂದು ಮಂಗಗಳು ಸಾವನ್ನಪ್ಪಿರುವುದಾಗಿ ಆರೋಗ್ಯ ಇಲಾಖೆಯ ಅಂಕಿ ಅಂಶಗಳಿಂದ ತಿಳಿದು ಬಂದಿದೆ.
ಮಂಗಗಳ ಸಾವಿನ ಮಾಹಿತಿ ತಿಳಿದಂತ ಆರೋಗ್ಯ ಇಲಾಖೆ, ಅರಣ್ಯಾಧಿಕಾರಿಗಳು, ಆರೋಗ್ಯ ಕಾರ್ಯಕರ್ತೆಯರು ಸ್ಥಳಕ್ಕೆ ತೆರಳಿ ಅವುಗಳ ಮಾದರಿಯನ್ನು ಸಂಗ್ರಹಿಸಿ ಮಂಗನ ಕಾಯಿಲೆಯ ಪತ್ತೆಗಾಗಿ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ. ಆ ಬಳಿಕ ಸಾವನ್ನಪ್ಪಿದ್ದಂತ ಮಂಗಗಳ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದಾರೆ.
ಸಾಗರ ತಾಲ್ಲೂಕಿನಲ್ಲಿ ಮಂಗಗಳು ಸಾವನ್ನಪ್ಪಿರುವುದರಿಂದ ಮುಂಜಾಗ್ರತಾ ಕ್ರಮಗಳ ಕುರಿತಂತೆ ಚರ್ಚಿಸಲು ನಾಳೆ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಆರೋಗ್ಯ, ಅರಣ್ಯ ಇಲಾಖೆ ಸೇರಿದಂತೆ ಇತರರೆ ಇಲಾಖೆಗಳ ಅಧಿಕಾರಿಗಳ ಸಭೆಯನ್ನು ಕರೆಯಲಾಗಿದೆ. ಎಸಿ ನೇತೃತ್ವದಲ್ಲಿ ಸೋಮವಾರದ ನಾಳೆ ಮಹತ್ವದ ಸಭೆ ನಡೆಯಲಿದೆ.
ನಾಳೆಯ ಎಸಿ ನೇತೃತ್ವದ ಸಭೆಯಲ್ಲಿ ಮಂಗಗಳ ಸಾವು, ಮಂಗನ ಕಾಯಿಲೆ ಉಲ್ಬಣಗೊಳ್ಳದಂತೆ ಏನೆಲ್ಲ ಕ್ರಮ ಕೈಗೊಳ್ಳಬೇಕು ಎನ್ನುವ ಬಗ್ಗೆಯೂ ಚರ್ಚೆ ನಡೆಸಲಾಗುತ್ತದೆ. ಜೊತೆ ಜೊತೆಗೆ ಮಂಗನ ಕಾಯಿಲೆಗೆ ಮುಂಜಾಗ್ರತಾ ಕ್ರಮವಾಗಿ ಔಷಧಗಳ ಸಂಗ್ರಹಣೆ, ನಿಯಂತ್ರಣ ಕ್ರಮಗಳ ಬಗ್ಗೆಯೂ ಕ್ರಮವಹಿಸಲಾಗುತ್ತಿದೆ ಎಂಬುದಾಗಿ ಹೇಳಲಾಗುತ್ತಿದೆ.
ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಸೂಚನೆಯ ಮೇರೆಗೆ ನಾಳೆ ಎಸಿ ಕಚೇರಿಯಲ್ಲಿ ಎಸಿ ನೇತೃತ್ವದಲ್ಲಿ ಮಂಗನ ಕಾಯಿಲೆ ಕುರಿತಂತೆ ಮಹತ್ವದ ಸಭೆಯುತ್ತಿದೆ. ಈ ಹಿಂದೆಯೇ ಶಾಸಕರು ಮಂಗನ ಕಾಯಿಲೆ ತಾಲ್ಲೂಕಿನಲ್ಲಿ ಉಲ್ಬಣವಾಗದಂತೆ ಕಟ್ಟೆಚ್ಚರ ವಹಿಸಲು ಆರೋಗ್ಯ ಇಲಾಖೆಗೆ ಖಡಕ್ ಸೂಚನೆಯನ್ನು ಕೂಡ ನೀಡಿದ್ದನ್ನು ಸ್ಮರಿಸಬಹುದಾಗಿದೆ.
ಈ ಬಗ್ಗೆ ಮಾತನಾಡಿದಂತ ಸಾಗರ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್ ಅವರು, ಮಂಗನ ಕಾಯಿಲೆ ನಿಯಂತ್ರಕ್ಕೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಆದರೇ ಜಾಗರೂಕತೆಯಿಂದ ಇರಬೇಕು. ಒಂದು ವೇಳೆ ಯಾರಿಗಾದರೂ ಜ್ವರ, ಗಂಟಲು ನೋವು, ಸುಸ್ತು, ಮೈಕೈನೋವಿನಂತ ಲಕ್ಷಣಗಳು ಕಂಡು ಬಂದರೇ ಸಾಗರ ಉಪ ವಿಭಾಗೀಯ ಆಸ್ಪತ್ರೆಗೆ ತೆರಳಿ ರಕ್ತ ಪರೀಕ್ಷೆ ಮಾಡಿಸಿ, ಚಿಕಿತ್ಸೆ ಪಡೆಯಿರಿ. ಈಗಾಗಲೇ ಮಂಗನ ಕಾಯಿಲೆಯ ಮುಂಜಾಗ್ರತಾ ಕ್ರಮವಾಗಿ ತಾಲ್ಲೂಕು ಆಸ್ಪತ್ರೆಯಲ್ಲಿ ಹತ್ತು ಹಾಸಿಗೆಗಳನ್ನು ಮೀಸಲಿಡಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು..
BREAKING: ಸಾಗರದ ಸಿಗಂದೂರು ಸೇತುವೆ ಮೇಲಿನಿಂದ ವ್ಯಕ್ತಿ ಆತ್ಮಹತ್ಯೆಗೆ ಯತ್ನ
BIG BREAKING: ಕಾಂಗ್ರೆಸ್ ಹಿರಿಯ ನಾಯಕ ‘ಶಾಮನೂರು ಶಿವಶಂಕರಪ್ಪ’ ವಿಧಿವಶ | Shamanur Shivashankarappa
‘ಡಿಜಿಟಲ್ ಅರೆಸ್ಟ್’ ವಂಚನೆ: 1 ಕೋಟಿ ರೂ. ಕಳೆದುಕೊಂಡ 82 ವರ್ಷದ ವ್ಯಕ್ತಿ | Digital arrest scam








