ಮುಂಬೈ:ಭಾರತೀಯ ಷೇರು ಮಾರುಕಟ್ಟೆಯಲ್ಲಿ ಇಂದು ಸಂಚಲನ ಸೃಷ್ಟಿಯಾಗಿದೆ. ಜಾಗತಿಕ ಮಾರುಕಟ್ಟೆಯ ಸಕಾರಾತ್ಮಕ ಅಂಶಗಳಿಂದಾಗಿ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 1,900 ಪಾಯಿಂಟ್ಸ್ಗಳಷ್ಟು ಬೃಹತ್ ಜಿಗಿತ ಕಂಡಿದೆ. ಈ ಏರಿಕೆಯಿಂದಾಗಿ ಕೇವಲ ಒಂದೇ ದಿನದಲ್ಲಿ ಹೂಡಿಕೆದಾರರ ಸಂಪತ್ತು ಸುಮಾರು 10 ಲಕ್ಷ ಕೋಟಿ ರೂಪಾಯಿಗಳಷ್ಟು ಹೆಚ್ಚಾಗಿದೆ.
ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಕಡಿಮೆಯಾಗುತ್ತಿರುವ ಮುನ್ಸೂಚನೆಗಳು ಸಿಕ್ಕಿವೆ. ಯುದ್ಧದ ಆತಂಕ ದೂರವಾಗುತ್ತಿದ್ದಂತೆ ಜಾಗತಿಕ ಹೂಡಿಕೆದಾರರಲ್ಲಿ ಹೊಸ ಭರವಸೆ ಮೂಡಿದೆ.ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ (Crude Oil) ಬೆಲೆ ಇಳಿಕೆಯಾಗಿರುವುದು ಭಾರತದಂತಹ ಆಮದು ಅವಲಂಬಿತ ದೇಶಕ್ಕೆ ದೊಡ್ಡ ವರದಾನವಾಗಿದೆ. ಇದು ಹಣದುಬ್ಬರ ಇಳಿಕೆಗೆ ಸಹಕಾರಿಯಾಗಲಿದೆ ಎಂಬ ನಿರೀಕ್ಷೆ ಮಾರುಕಟ್ಟೆಯಲ್ಲಿದೆ.
ಏಷ್ಯನ್ ಮತ್ತು ಯುರೋಪಿಯನ್ ಮಾರುಕಟ್ಟೆಗಳಲ್ಲಿ ಕಂಡುಬಂದ ಚೇತರಿಕೆ ಭಾರತೀಯ ಮಾರುಕಟ್ಟೆಯ ಮೇಲೂ ಸಕಾರಾತ್ಮಕ ಪರಿಣಾಮ ಬೀರಿದೆ. ಕಳೆದ ಕೆಲವು ದಿನಗಳಿಂದ ಸತತ ಕುಸಿತ ಕಂಡಿದ್ದರಿಂದ, ಕಡಿಮೆ ಬೆಲೆಗೆ ಷೇರುಗಳನ್ನು ಖರೀದಿಸಲು ಹೂಡಿಕೆದಾರರು ಮುಗಿಬಿದ್ದಿದ್ದಾರೆ. ಇದು ಮಾರುಕಟ್ಟೆಯ ದಿಢೀರ್ ಏರಿಕೆಗೆ ಮುಖ್ಯ ಕಾರಣವಾಗಿದೆ.
ಎಚ್ಡಿಎಫ್ಸಿ (HDFC), ರಿಲಯನ್ಸ್ (Reliance) ಮತ್ತು ಇನ್ಫೋಸಿಸ್ನಂತಹ ಪ್ರಮುಖ ಕಂಪನಿಗಳ ಷೇರುಗಳು ಭಾರಿ ಬೇಡಿಕೆ ಕಂಡಿದ್ದು, ಸೂಚ್ಯಂಕವನ್ನು ಮೇಲಕ್ಕೆತ್ತಿವೆ.
ಮಾರುಕಟ್ಟೆಯ ಈ ಭರ್ಜರಿ ಜಿಗಿತದಿಂದಾಗಿ ಬಿಎಸ್ಇ (BSE) ಪಟ್ಟಿಯಲ್ಲಿರುವ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯವು ಗಣನೀಯವಾಗಿ ಏರಿಕೆಯಾಗಿದ್ದು, ಹೂಡಿಕೆದಾರರು ಲಕ್ಷಾಂತರ ಕೋಟಿ ರೂಪಾಯಿ ಲಾಭ ಗಳಿಸಿದ್ದಾರೆ.








