ಶಿವಮೊಗ್ಗ: ಜಿಲ್ಲೆಯ ಸಾಗರ ನಗರದ ಆರಾಧ್ಯ ದೈವ ಶ್ರೀ ಮಾರಿಕಾಂಬಾ ದೇವಿಯ ಎರಡನೇ ವರ್ಷದ ವರ್ಧಂತಿ ಉತ್ಸವವು ಮೇ 3ರಂದು ಅತ್ಯಂತ ಸಂಭ್ರಮದಿಂದ ನಡೆಯಲಿದೆ. ಈ ಪ್ರಯುಕ್ತ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ ಅಧ್ಯಕ್ಷ ಎಂ. ನಾಗರಾಜ್ ತಿಳಿಸಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ವರ್ಧಂತಿ ಉತ್ಸವದ ಸಿದ್ಧತೆಗಳ ಕುರಿತು ಮಾಹಿತಿ ನೀಡಿದರು.
ಹೀಗಿದೆ ಧಾರ್ಮಿಕ ಕಾರ್ಯಕ್ರಮಗಳ ವಿವರ
ಮೇ 3ರ ಭಾನುವಾರ ಬೆಳಿಗ್ಗೆ 8 ಗಂಟೆಯಿಂದಲೇ ದೇವಸ್ಥಾನದಲ್ಲಿ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿವೆ. ವರ್ಧಂತಿ ಉತ್ಸವದ ಅಂಗವಾಗಿ ಈ ಕೆಳಗಿನ ಕಾರ್ಯಕ್ರಮಗಳು ನಡೆಯಲಿವೆ:
-
ಕಲಾಭಿವೃದ್ಧಿ ಹವನ ಹಾಗೂ ಕಲಶಾಭಿಷೇಕ.
-
ಸಾರ್ವಜನಿಕ ದುರ್ಗಾ ಹವನ: ಲೋಕಕಲ್ಯಾಣಾರ್ಥವಾಗಿ ಹಮ್ಮಿಕೊಳ್ಳಲಾಗಿರುವ ಈ ಹವನದಲ್ಲಿ ಭಕ್ತರು 250 ರೂ. ಪಾವತಿಸಿ ಹೆಸರು ನೋಂದಾಯಿಸಿಕೊಳ್ಳಬಹುದು.
-
ಪೂರ್ಣಾಹುತಿ: ಮಧ್ಯಾಹ್ನ 12:30ಕ್ಕೆ ದುರ್ಗಾ ಹವನದ ಪೂರ್ಣಾಹುತಿ ನಡೆಯಲಿದೆ.
-
ಅನ್ನಸಂತರ್ಪಣೆ: ಮಧ್ಯಾಹ್ನ 1 ಗಂಟೆಯಿಂದ ಸಾರ್ವಜನಿಕರಿಗೆ ಮಹಾಪ್ರಸಾದ ವಿನಿಯೋಗವಿರುತ್ತದೆ.
ಸಂಪ್ರದಾಯದ ಮುಂದುವರಿಕೆ
“ಕಳೆದ ವರ್ಷದಿಂದ ದೇವಸ್ಥಾನದ ಸಮಿತಿಯು ದೇವಿಯ ಗಂಡನ ಮನೆ ಮತ್ತು ತವರು ಮನೆ ದೇವಸ್ಥಾನಗಳಲ್ಲಿ ವರ್ಧಂತಿ ಉತ್ಸವವನ್ನು ಆಚರಿಸುವ ಸಂಪ್ರದಾಯಕ್ಕೆ ಚಾಲನೆ ನೀಡಿದೆ. ನಮ್ಮ ನೂತನ ಸಮಿತಿಯು ಈ ಪರಂಪರೆಯನ್ನು ಮುಂದುವರಿಸುತ್ತಿದ್ದು, ದಾನಿಗಳು ಹೆಚ್ಚಿನ ಸಹಕಾರ ನೀಡುತ್ತಿದ್ದಾರೆ,” ಎಂದು ನಾಗರಾಜ್ ವಿವರಿಸಿದರು.
ಲೆಕ್ಕಪತ್ರ ಸಲ್ಲಿಕೆ
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, “ನೂತನ ಸಮಿತಿ ಅಧಿಕಾರಕ್ಕೆ ಬಂದ ನಂತರ ನಡೆಯುತ್ತಿರುವ ಮೊದಲ ಧಾರ್ಮಿಕ ಕಾರ್ಯಕ್ರಮ ಇದಾಗಿದೆ. ಹಿಂದಿನ ಜಾತ್ರೆಯ ಲೆಕ್ಕಪತ್ರಗಳನ್ನು ನೀಡಲು ಹಳೆಯ ಸಮಿತಿಗೆ ಸೂಚಿಸಲಾಗಿದ್ದು, ಜೂನ್ 15ರೊಳಗೆ ಸಂಪೂರ್ಣ ಲೆಕ್ಕಪತ್ರ ಲಭ್ಯವಾಗಲಿದೆ. ನಂತರ ಸರ್ವ ಸದಸ್ಯರ ಸಭೆ ಕರೆದು ಮಾಹಿತಿ ನೀಡಲಾಗುವುದು,” ಎಂದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಡಿ. ಆನಂದ್ ಮಾತನಾಡಿ, ವರ್ಧಂತಿ ಉತ್ಸವವು ಕಾಲಮಿತಿಯೊಳಗೆ ನಡೆಯಬೇಕಾಗಿರುವುದರಿಂದ ತುರ್ತಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಮಿತಿಯ 36 ಸದಸ್ಯರು ಉತ್ಸವದ ಯಶಸ್ವಿಗೆ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.
ಈ ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ವಿ.ಶಂಕರ್(ಮಾಸ್ಟರ್ ಶಂಕರ್), ಪುರುಷೋತ್ತಮ(ಪುಚ್ಚಿ), ಡಿಶ್ ಗುರು, ಶ್ರೀನಿವಾಸ್ ಮೇಸ್ತ್ರಿ, ಟಿ.ರಾಮಪ್ಪ, ಧರ್ಮರಾಜ್, ಅಶೋಕ್, ಲಲಿತಮ್ಮ, ಜ್ಯೋತಿ ಶಶಿಧರ್, ಮೋಹನ್ ಎನ್, ಜಿ.ರಾಮಪ್ಪ, ಎನ್.ನಾರಾಯಣ್ ಉಪಸ್ಥಿತರಿದ್ದರು.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು..
SHOCKING: ದೆಹಲಿ ಹೈಕೋರ್ಟ್ ವಿಚಾರಣೆ ವೇಳೆ ಸ್ಕ್ರೀನ್ ಮೇಲೆ ಅಶ್ಲೀಲ ವಿಡಿಯೋ ಪ್ರಸಾರ: ನ್ಯಾಯಮೂರ್ತಿಗಳು ಶಾಕ್
Watch Video: ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಪ್ರಧಾನಿ ವಿಶೇಷ ಪೂಜೆ: ತ್ರಿಶೂಲ ಹಿಡಿದು ಡಮರು ನುಡಿಸಿದ ಮೋದಿ








