ಬೆಂಗಳೂರು : ಬೆಂಗಳೂರಿನಲ್ಲಿ MBBS ಸೀಟ್ ಕೊಡಿಸುವುದಾಗಿ ನಂಬಿಸಿ ಯುವತಿಗೆ 25 ಲಕ್ಷ ರೂಪಾಯಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಬನಶಂಕರಿ ಪೊಲೀಸರು ಡಾ. ಕೆ.ಪಿ. ಶರತ್ ಸೇರಿದಂತೆ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಆಯೇಷಾ ಖಥುಮ್ ಎಂಬಾಕೆಗೆ ಸೀಟ್ ಕೊಡಿಸುವುದಾಗಿ ನಂಬಿಸಿದ್ದ ಡಾ.ಕೆ.ಪಿ. ಶರತ್ ಸೇರಿದಂತೆ ನಾಲ್ವರ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಶಂಶೇರ್ ಬೇಗ್, ಸೈಯದ್ ತಬ್ರೇಜ್ ಮೂಲಕ ಸಂತ್ರಸ್ತ ಯುವತಿಗೆ ಡಾ.ಶರತ್ ಪರಿಚಯವಾಗಿದ್ದು, ಕಿಮ್ಸ್ ಕಾಲೇಜಿನಲ್ಲಿ ಸೀಟ್ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಲಾಗಿದೆ ಎಂದು ಆರೋಪಿಸಲಾಗಿದೆ. ಆರೋಪಿಗಳ ವಿರುದ್ಧ BNS 318(4), 318(2) ಸೇರಿ ಒಟ್ಟು 8 ಸೆಕ್ಷನ್ಗಳ ಅಡಿ ಪ್ರಕರಣ ದಾಖಲಾಗಿದೆ.
ದ್ವಿತೀಯ ಪಿಯುಸಿ ಮತ್ತು NLT ಪರೀಕ್ಷೆಗಳನ್ನು ಬರೆದಿದ್ದ ಯುವತಿ MBBSಗೆ ಸೇರಿಕೊಳ್ಳುವ ಬಗ್ಗೆ ಯೋಚಿಸಿ, ಒಳ್ಳೆಯ ಕಾಲೇಜಿನಲ್ಲಿ ಸೀಟ್ಗಾಗಿ ಪ್ರಯತ್ನಿಸುತ್ತಿದ್ದರು. ಈ ನಡುವೆ ಪರಿಚಯದ ಸೈಯದ್ ತಬ್ರೇಜ್ ಮೂಲಕ ಶಂಶೇರ್ ಬೇಗ್ ಎಂಬಾತನ ಪರಿಚಯವಾಗಿತ್ತು. ಈತ ತನಗೆ ಕಿಮ್ಸ್ ಮೆಡಿಕಲ್ ಕಾಲೇಜಿನ ಪ್ರೆಸಿಡೆಂಟ್ ಪರಿಚಯವಿರುವುದಾಗಿ ಹೇಳಿ ಡಾ. ಶರತ್ ಕೆ.ಪಿ. ಎಂಬುವವರನ್ನು ಪರಿಚಯಿಸಿದ್ದ. ಅದರಂತೆ ಬನಶಂಕರಿ 2ನೇ ಹಂತದಲ್ಲಿನ ಕಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಶರತ್ನ ಭೇಟಿಯಾಗಿದ್ದರು.
ಈ ವೇಳೆ ಇದೇ ಕಾಲೇಜಿನಲ್ಲಿ ಆಯೇಷಾ ಖಥುಮ್ಗೆ ಸೀಟ್ ಕೊಡಿಸೋದಾಗಿ ನಂಬಿಸಿ ಶೈಕ್ಷಣಿಕ ದಾಖಲೆಗಳನ್ನು ಪಡೆಯಲಾಗಿತ್ತು ಎನ್ನಲಾಗಿದೆ. ನಂತರ ಇವರ ಮಾತು ನಂಬಿ ಯುವತಿ ಕಡೆಯವರು ಹಂತ ಹಂತವಾಗಿ ಯುಪಿಐ, ಚೆಕ್ ರೂಪದಲ್ಲಿ 10 ಲಕ್ಷ ರೂ. ಹಣ ನೀಡಿದ್ದಾರೆ. ಬಳಿಕ ಆರೋಪಿಗಳ ಡಿಮ್ಯಾಂಡ್ ಹಿನ್ನೆಲೆ ಉಳಿದವ 15 ಲಕ್ಷವನ್ನ ನಗದು ರೂಪದಲ್ಲಿ ನೀಡಲಾಗಿದೆ. ಪೂರ್ತಿ ಹಣ ಕೈಸೇರಿದ ಮೇಲೆ ಆರೋಪಿಗಳು ತಮ್ಮ ಅಸಲಿ ರೂಪ ತೋರಿಸಿದ್ದು, ಮೆಡಿಕಲ್ ಸೀಟ್ ಕೊಡಿಸದೇ ವಂಚಿಸಿದ್ದಾರೆ. ಅಂತಿಮವಾಗಿ ತಾವು ಮೋಸ ಹೋಗಿದ್ದು ಅರಿತ ಯುವತಿ ಕಡೆಯವರು ಈ ಬಗ್ಗೆ ಪೊಲೀಸರ ಮೊರೆ ಹೋಗಿದ್ದಾರೆ.a








