ರಾಜ್ಯ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮತ್ತು ಎಸಿಬಿಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಸೀಮಂತ್ ಕುಮಾರ್ ಸಿಂಗ್ ಅವರನ್ನು ಟೀಕಿಸಿದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರ ಹೇಳಿಕೆಗಳಿಗೆ ಸುಪ್ರೀಂ ಕೋರ್ಟ್ ಜುಲೈ 18, ಸೋಮವಾರ ತಡೆಯಾಜ್ಞೆ ನೀಡಿದೆ. ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಮತ್ತು ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಹಿಮಾ ಕೊಹ್ಲಿ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು ನ್ಯಾಯಮೂರ್ತಿ ಸಂದೇಶ್ ಅವರ ಹೇಳಿಕೆಗಳು ‘ಅಪ್ರಸ್ತುತ’ ಎಂದು ಅಭಿಪ್ರಾಯಪಟ್ಟಿದೆ. ಈ ಅವಲೋಕನಗಳು ಅವರು ವಿಚಾರಣೆ ನಡೆಸುತ್ತಿರುವ ಜಾಮೀನು ಅರ್ಜಿಯ ವ್ಯಾಪ್ತಿಯನ್ನು ಮೀರಿವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.
ಆಗಿದ್ದೇನು? ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಸರ್ಕಾರಿ ಅಧಿಕಾರಿಯ ಜಾಮೀನು ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರು ಕರ್ನಾಟಕ ಭ್ರಷ್ಟಾಚಾರ ನಿಗ್ರಹ ದಳವನ್ನು ತರಾಟೆಗೆ ತೆಗೆದುಕೊಂಡಿದ್ದರು. ಕರ್ನಾಟಕ ಭ್ರಷ್ಟಾಚಾರ ನಿಗ್ರಹ ದಳವನ್ನು ‘ಭ್ರಷ್ಟಾಚಾರ ನಿಗ್ರಹ ಕೇಂದ್ರ’ ಮತ್ತು ‘ಸಂಗ್ರಹಣಾ ಕೇಂದ್ರ’ ಎಂದು ಕರೆದಿದ್ದ ಹೈಕೋರ್ಟ್, ಪ್ರಸ್ತುತ ಅದು ಕಳಂಕಿತ ಎಡಿಜಿಪಿ ನೇತೃತ್ವದಲ್ಲಿದೆ ಎಂದು ಹೇಳಿತ್ತು. ನಂತರ ಎಡಿಜಿಪಿ ಅವರು ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ಹೇಳಿಕೆಗಳ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಸೋಮವಾರ, ನ್ಯಾಯಮೂರ್ತಿ ಸಂದೇಶ್ ಅವರು ಕೇಳಿದ ಸೇವಾ ವರದಿ ಮತ್ತು ಎಸಿಬಿಯ ಬಗ್ಗೆ ಅವಲೋಕನಗಳು ಸೇರಿದಂತೆ ವಿಚಾರಣೆಗಳಿಗೆ ತಡೆ ನೀಡಿದ ಸುಪ್ರೀಂ ಕೋರ್ಟ್, “ಮೇಲ್ನೋಟಕ್ಕೆ, ಮಾಡಿದ ಅವಲೋಕನಗಳು ಜಾಮೀನು ಅರ್ಜಿಯೊಂದಿಗೆ ಸಂಪರ್ಕ ಹೊಂದಿಲ್ಲ. ಜಾಮೀನು ವಿಚಾರಣೆಯ ವ್ಯಾಪ್ತಿಯಲ್ಲಿ ಈ ಅವಲೋಕನಗಳನ್ನು ಮಾಡಲಾಗಿಲ್ಲ. ಎಸಿಬಿ ಅಧಿಕಾರಿಯ ನಡವಳಿಕೆಯು ಜಾಮೀನು ಅರ್ಜಿಯೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಜಾಮೀನು ಅರ್ಜಿಯನ್ನು ನಿರ್ಧರಿಸುವಂತೆ ನಾವು ಹೈಕೋರ್ಟ್ ಗೆ ನಿರ್ದೇಶಿಸುತ್ತೇವೆ” ಎಂದು ನ್ಯಾಯಪೀಠ ಹೇಳಿದೆ.