ದಾವಣಗೆರೆ : ಮುಂದಿನ ಬಾರಿಯೂ ನರೇಂದ್ರಮೋದಿಯವರೇ ಪ್ರಧಾನಿಯಾಗಲಿದ್ದು, ಅವರ ಅವಧಿಯಲ್ಲಿಯೇ ಎಸ್ಸಿ ಎಸ್ಟಿ ಸಮುದಾಯದ ಮೀಸಲಾತಿ ಹೆಚ್ಚಳ ಮಾಡಿರುವುದನ್ನು ಸಂವಿಧಾನದ ಶೆಡ್ಯುಲ್ 9ಕ್ಕೆ ಸೇರಿಸಲು ಒತ್ತಾಯ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅವರು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ನಡೆದ ವಾಲ್ಮೀಕಿ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ನಾಯಕ ಸಮುದಾಯವನ್ನು ಎಸ್ಟಿಗೆ ಸೇರಿಸಲು ದೊಡ್ಡ ಮಟ್ಟದ ಹೋರಾಟ ನಡೆದಿದೆ. ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿ ಯಾಗಿದ್ದಾಗಿದ್ದಾಗ ಶಿಫಾರಸ್ಸು ಮಾಡಿದ್ದರು, ಕೇಂದ್ರದಲ್ಲಿ ಚಂದ್ರಶೇಖರ ನೇತೃತ್ವದ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಮಾಜಿ ಪ್ರಧಾನಿ ದೇವೇಗೌಡರು ಎಸ್ಟಿಗೆ ಸೇರಿಸಲು ಶ್ರಮ ವಹಿಸಿದ್ದರು ಎಂದು ಹೇಳಿದರು.
ನಾಯಕ ಸಮುದಾಯಕ್ಕೆ ಎಸ್ಟಿಗೆ ಸೇರ್ಪಡೆ ಮಾಡಿದ ನಂತರ ಮೂವತ್ತೈದು ವರ್ಷಗಳ ನಂತರ ಈ ಸಮುದಾಯದ ಜನಸಂಖ್ಯೆ ಹೆಚ್ಚಾಗಿದೆ. ಆಶೋತ್ತರಗಳು ಹೆಚ್ಚಾಗಿವೆ. ನಮ್ಮ ಸಂವಿಧಾನ ಜೀವಂತಿಕೆ ಇರುವ ಸಂವಿಧಾನ, ಕಾಲಕ್ಕೆ ತಕ್ಕಂತೆ ತಿದ್ದುಪಡಿ ಮಾಡಲು ಅವಕಾಶ ಇದೆ. ಕೆಲವು ದೇಶದ ಸಂವಿಧಾನಗಳನ್ನು ಬರೆದು ಇಟ್ಟಿದ್ದಾರೆ. ಅವು ಜೀವಂತಿಕೆಯನ್ನು ಕಳೆದುಕೊಂಡಿವೆ. ದೇಶದಲ್ಲಿ ಕಾಲಕಾಲಕ್ಕೆ ಆಗುವ ಸಾಮಾಜಿಕ ಬದಲಾವಣೆಗೆ ತಕ್ಕಂತೆ ಸಂವಿಧಾನ ತಿದ್ದುಪಡಿ ಮಾಡಲು, ಸಮಾಜದ ಬೇಡಿಕೆಗಳಿಗೆ ಸ್ಪಂದಿಸುವ ಇಚ್ಚಾಶಕ್ತಿ ಬೇಕಿದೆ. ವಾಲ್ಮೀಕಿ ಸ್ವಾಮೀಜಿಗಳ ಹೋರಾಟದ ಫಲದಿಂದ ಎಸ್ಟಿ ಮೀಸಲಾತಿ ಪ್ರಮಾಣವನ್ನು ಶೇ 3 ರಿಂದ 7 ಕ್ಕೆ ಹೆಚ್ಚಳ ಮಾಡಲು ನನಗೆ ಪ್ರೇರಣೆಯಾಯಿತು ಎಂದು ಹೇಳಿದರು.
ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಮಾಡುವುದಕ್ಕೆ ಕೆಲವರು ಜೇನುಗೂಡಿಗೆ ಕೈ ಹಾಕುತ್ತಿದ್ದೀರಿ ಎಂದು ಹೇಳಿದರು.ನಾನು ನನಗೆ ಜೇನು ಕಡಿದರೂ ಚಿಂತೆಯಿಲ್ಲ, ಈ ಸಮುದಾಯಗಳಿಗೆ ಜೇನು ತಿನ್ನಿಸುತ್ತೇನೆ ಎಂದು ಐತಿಹಾಸಿಕ ತೀರ್ಮಾನ ಕೈಗೊಂಡಿದ್ದೇನೆ. ಮೀಸಲಾತಿ ಹೆಚ್ಚಳದ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ್ದೇವೆ. ಅಲ್ಲದೇ ಶೆಡ್ಯುಲ್ 9 ನಲ್ಲಿ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದೇವೆ. ಮುಂದಿನ ಬಾರಿಯೂ ಮೋದಿಯವರೇ ಪ್ರಧಾನಿ ಆಗುವುದರಿಂದ ಮೀಸಲಾತಿ ಹೆಚ್ಚಳವನ್ನು ಶೆಡ್ಯುಲ್ 9 ಗೆ ಸೇರಿಸಲು ಒತ್ತಾಯಿಸುವುದಾಗಿ ತಿಳಿಸಿದರು.
ಮೀಸಲಾತಿ ಹೆಚ್ಚಳ ದಿಂದ ಎಸ್ಟಿ ಸಮುದಾಯಕ್ಕೆ ಸುಮಾರು 3500 ಹೆಚ್ಚು ಎಂಜನಿಯರಿಂಗ್ ಸೀಟುಗಳು, ಸುಮಾರು 400 ವೈದ್ಯಕೀಯ ಸೀಟುಗಳು ಹೆಚ್ಚುವರಿಯಾಗಿ ದೊರೆತಿವೆ. ಅಲ್ಲದೆ ಎಲ್ಲ ಇಲಾಖೆಗಳ ಬಡ್ತಿಯಲ್ಲಿ ಹೆಚ್ಚು ಅವಕಾಶಗಳು ದೊರೆತಿವೆ. ನಾವು ಮಾಡಿರುವ ಆದೇಶವನ್ನು ಈ ರಾಜ್ಯ ಸರ್ಕಾರ ಜಾರಿಗೊಳಿಸಬೇಕು. ಆ ಕೆಲಸವನ್ನು ವಾಲ್ಮೀಕಿ ಸ್ವಾಮೀಜಿ ಈ ಸರ್ಕಾರ ದಿಂದ ಮಾಡಿಸಬೇಕು ಎಂದರು.
ಪ್ರಜಾಪ್ರಭುತ್ವ ದಲ್ಲಿ ಜನರ ಇಚ್ಚಾಶಕ್ತಿಯೇ ಅಂತಿಮ, ಆ ವಿಚಾರದಲ್ಲಿ ನನಗೆ ಜನರ ಇಚ್ಚಾಶಕ್ತಿಗೆ ಅನುಗುಣವಾಗಿ ಕೆಲಸ ಮಾಡಿದ್ದೇನೆ ಎಂಬ ಹೆಮ್ಮೆ ಇದೆ. ನನ್ನ ಅವಧಿಯಲ್ಲಿ ಎಸ್ಸಿಎಸ್ಟಿ, ಹಿಂದುಳಿದವರಿಗೆ ಸಾಮಾಜಿಕವಾಗಿ ನ್ಯಾಯ ಕೊಡಲು ಮೀಸಲಾತಿ ಹೆಚ್ಚಿಸುವ ಕೆಲಸ ಮಾಡಿದ್ದು, ನಾವು ಮಾಡಿರುವ ತೀರ್ಮಾನಗಳು ಮುಂದಿನ ದಿನಗಳಲ್ಲಿ ಆ ಸಮುದಾಯಗಳಿಗೆ ಅನುಕೂಲವಾಗುವ ವಿಶ್ವಾಸ ನನಗಿದೆ. ಒಬ್ಬ ನಾಯಕನಾಗಿ ನಮ್ಮ ಜನರಿಗೆ ರಕ್ಷಣೆ ಕೊಡದಿದ್ದರೆ ಏನು ಪ್ರಯೋಜನ? ನಾವು ಯಾವುದೇ ಸಮುದಾಯದಲ್ಲಿ ಹುಟ್ಡಿರಬಹುದು ಆದರೆ, ತುಳಿತಕ್ಕೊಳಗಾದ ಸಮುದಾಯಗಳಿಗೆ ನ್ಯಾಯ ಕೊಡಿಸುವ ಅವಾಕಾಶ ಸಿಕ್ಕಾಗ ಆ ಕೆಲಸವನ್ನು ಮಾಡಬೇಕು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿದ್ದರೆ ಅದರ ಆತ್ಮ ವಾಲ್ಮೀಕಿ, ಅವರ ಮಂದಿರ ಕಟ್ಟಬೇಕೆನ್ನುವ ನಾಯಕ ಸಮುದಾಯದ ಬೇಡಿಕೆಯನ್ನು ಉತ್ತರ ಪ್ರದೇಶದ ಸರ್ಕಾರದ ಗಮನಕ್ಕೆ ತಂದು ಭವ್ಯ ವಾಲ್ಮೀಕಿ ಮಂದಿರ ನಿರ್ಮಾಣ ಮಾಡಲು ಆಗ್ರಹಿಸುವುದಾಗಿ ತಿಳಿಸಿದರು.
ವಾಲ್ಮೀಕಿ ಪರಿವರ್ತನೆಯ ಹರಿಕಾರ
ಮಹರ್ಷಿ ವಾಲ್ಮೀಕಿ ಅಂದರೆ, ಚೈತನ್ಯ, ಶಕ್ತಿ, ಪರಿವರ್ತನೆಯ ಹರಿಕಾರ, ಗಾಳಿ, ನೀರು, ಪ್ರಕೃತಿ ನಿರಂತರ ಪರಿವರ್ತನೆ ಆಗುತ್ತಿರುತ್ತದೆ. ಪರಿವರ್ತನೆಗೆ ಅತ್ಯಂತ ಶ್ರೇಷ್ಠ ಉದಾಹರಣೆ ವಾಲ್ಮೀಕಿ, ವಾಲ್ಮೀಕಿ ಇಲ್ಲದೇ ರಾಮಾಯಣ ಇಲ್ಲ. ರಾಮಾಯಣ ಇಲ್ಲದೆ ರಾಮ ಇಲ್ಲ. ದೇಶದಲ್ಲಿ 123 ರಾಮಾಯಣ ಕೃತಿಗಳಿವೆ ಅವುಗಳಲ್ಲಿ ಶ್ರೇಷ್ಠವಾಗಿರುವ ಕೃತಿ ಎಂದರೆ ವಾಲ್ಮೀಕಿ ರಾಮಾಯಣ ಎಂದು ಹೇಳಿದರು.
ಸೀತೆ ಎರಡನೇ ಬಾರಿ ವನವಾಸದಲ್ಲಿದ್ದಾಗ ಲವಕುಶ ಹುಟ್ಟುವ ಮೊದಲು ವಾಲ್ಮೀಕಿಮಹರ್ಷಿ ಸೀತೆಗೆ ಆಶ್ರಯ ಕೊಟ್ಟಿದ್ದರು. ಹೀಗಾಗಿ ವಾಲ್ಮೀಕಿ ರಾಮಾಯಣ ಅತ್ಯಂತ ಸತ್ಯವಾದ ಶ್ರೇಷ್ಠ ರಾಮಾಯಣ. ಜಗತ್ತಿನ ಹತ್ತು ಶ್ರೇಷ್ಠ ಧರ್ಮಗ್ರಂಥಗಳಲ್ಲಿ ವಾಲ್ಮೀಕಿ ರಾಮಾಯಣ ಉನ್ನತ ಸ್ಥಾನದಲ್ಲಿದೆ. ಇದು ವಾಲ್ಮೀಕಿಯ ಜ್ಞಾನದ ಶಕ್ತಿ, ವಾಲ್ಮೀಕಿ ಅಕ್ಷರದ ಶಕ್ತಿ ಎಂದರು. ಅಂತಹ ವಾಲ್ಮೀಕಿ ಕುಲಕ್ಕೆ ಸೇರಿದವರು ಜ್ಞಾನದಲ್ಲಿ ಹಿಂದೆ ಬೀಳಬಾರದು. ವಾಲ್ಮೀಕಿಯ ಜ್ಣಾನದ ಸಾಮರ್ಥ್ಯ, ಏಕಲವ್ಯನ ಏಕಾಗ್ರತೆ ಸಾಮರ್ಥ್ಯ, ಬೇಡರ ಕಣ್ಣಪ್ಪಣ ಭಕ್ತಿಯ ಸಾಮರ್ಥ್ಯ , ಮದಕರಿ ನಾಯಕ, ಸುರಪುರದ ನಾಯಕರ ವೀರತನದ ಸಾಮರ್ಥ್ಯ ಈ ಕುಲದ ಗುಣಧರ್ಮಗಳು. ಇದನ್ನು ಯಾರೂ ಮರೆಯಬಾರದು ಎಂದು ಹೇಳಿದರು.
ಈ ದೇಶ ರಾಮನ ದೇಶ, ಕಷ್ಟ ಕಾಲದಲ್ಲಿ ಈ ದೇಶವನ್ನು ರಕ್ಷಿಸಿದವರು ವಾಲ್ಮೀಕಿ ಕುಲದವರು. ನಿಮ್ಮ ಕುಲದ ಬಗ್ಗೆ ನಿಮಗೆ ಹೆಮ್ಮೆ ಇದ್ದರೆ, ನಿಮಗೆ ಅತ್ಯಂತ ಉನ್ನತ ಸ್ಥಾನ ಮಾನ ಎಲ್ಲವೂ ದೊರೆಯುತ್ತವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕ ಆರ್. ಅಶೋಕ್, ಮಾಜಿ ಸಚಿವ ರಾಜುಗೌಡ, ವಾಲ್ಮೀಕಿ ಪೀಠಾಧ್ಯಕ್ಷ ಪ್ರಸನ್ನಾನಂದಪುರಿ ಸ್ವಾಮೀಜಿ, ಹರಿಹರ ಪಂಚಮಸಾಲಿ ಪೀಠಾಧ್ಯಕ್ಷ ವಚನಾನಂದಸ್ವಾಮೀಜಿ ಹಾಜರಿದ್ದರು.
ಕಡಿ, ಬಡಿ, ಕತ್ತರಿಸು, ಕೊಲ್ಲು ಎನ್ನುವುದೇ ‘RSS’ನಲ್ಲಿ ತರಬೇತಿ ಪಡೆದವರ ಭಾಷೆ – ಸಿಎಂ ಸಿದ್ದರಾಮಯ್ಯ ವಾಗ್ಧಾಳಿ
ರಾಜ್ಯ ಸರ್ಕಾರದಿಂದ ‘ಮಹಿಳೆ’ಯರಿಗೆ ‘ಶಕ್ತಿ, ಗೃಹಲಕ್ಷ್ಮಿ ಯೋಜನೆ’ ಬಳಿಕ ಮತ್ತೊಂದು ಗುಡ್ ನ್ಯೂಸ್