ವಿಜಯಪುರ : ಆಟವಾಡುತ್ತಾ ಕೊಳವೆ ಬಾವಿಗೆ ಎರಡು ವರ್ಷದ ಬಾಲಕ ಸಾತ್ವಿಕ್ ಬಿದ್ದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಇನ್ನೇನು ಅರ್ಧ ಅಡಿ ಕೊರೆದರೆ ಬಾಲಕ ಸಾತ್ವಿಕನನ್ನು ರಕ್ಷಿಸಬಹುದಾಗಿದೆ. ಸತತ 14 ಗಂಟೆಗಳ ಕಾಲ ಅನ್ನ ನೀರು ಇಲ್ಲದೆ ಬಾಲಕ ಕೊಳೆಬಾವಿಯಲ್ಲಿ ಸಿಲುಕಿ ನರಳುತ್ತಿದ್ದಾನೆ. ಅರ್ಧ ಅಡಿ ಕೊರೆದರೆ ಬಾಲಕನ ರಕ್ಷಣೆ ಯಾಗುತ್ತದೆ ಎಂದು ಹೇಳಲಾಗುತ್ತಿದೆ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಬುಧವಾರ ಕೊಳವೆ ಬಾವಿಗೆ ಬಿದ್ದ 2 ವರ್ಷದ ಮಗು ಸಾತ್ವಿಕ್ ಮುಜಗೊಂಡ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಇನ್ನು ಅರ್ಧ ಅಡಿಯಷ್ಟೇ ಬಾಕಿ ಇದೆ. ಇದರ ಜೊತೆಗೆ ಮಗುವಿನ ಚಲನವಲನಗಳ ಬಗ್ಗೆ ಕ್ಯಾಮಾರದಲ್ಲಿ ಗಮನಿಸಲಾಗುತ್ತಿದ್ದು, ಮಗು ಕಾಲು ಅಲ್ಲಾಡಿಸುತ್ತಿರುವುದು ಕ್ಯಾಮರಾದಲ್ಲಿ ದಾಖಲಾಗಿದೆ.
ಕೊಳವೆಬಾವಿಯ 16 ಅಡಿ ಆಳದಲ್ಲಿ ಮಗು ಸಿಲುಕಿದ್ದು, ಮಗುವಿನ ರಕ್ಷಣೆಗೆ 20 ಅಡಿಗಳಷ್ಟು ಡಿಗ್ಗಿಂಗ್ ಮಾಡಿ 5 ಅಡಿಗಳ ಮತ್ತೊಂದು ಸುರಂಗವನ್ನು ಕೊರೆಯಲಾಗುತ್ತಿದೆ. 4.5 ಅಡಿ ಕೊರೆದು ಆಗಿದ್ದು ಇನ್ನು ಮಗುವನ್ನು ತಲುಪಲು ಅರ್ಧ ಅಡಿಯಷ್ಟೇ ಬಾಕಿ ಇದೆ. ಕಲ್ಲು ಬಂಡೆಗಳು ಅಡ್ಡಿಯಾಗಿರುವ ಕಾರಣ ಕಾರ್ಯಾಚರಣೆ ತಡವಾಗುತ್ತಿದೆ. ಕಲ್ಲು ಬಂಡೆಗಳನ್ನ ಒಡೆದು SDRF ತಂಡ ಕಾರ್ಯಾಚರಣೆ ಮಾಡುತ್ತಿದೆ.
ಮಗು ಸಾತ್ವಿಕ್ ಮುಜಗೊಂಡ ಬದುಕಿ ಬರಲೆಂದು ಇಡೀ ಊರಿನ ಜನ ಲಚ್ಯಾಣ ಗ್ರಾಮದ ಸಿದ್ದಪ್ಪ ಮಹಾರಾಜರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ತಂದೆ-ತಾಯಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಗುವನ್ನು ಹೊರತೆಗೆದ ತಕ್ಷಣ ಪ್ರಥಮ ಚಿಕಿತ್ಸೆ ನೀಡಲು ವೈದ್ಯರ ತಂಡ, ಆಂಬುಲೆನ್ಸ್ ಎಲ್ಲವೂ ಸ್ಥಳದಲ್ಲಿ ಸಜ್ಜಾಗಿದೆ.