ನವದೆಹಲಿ: ತಮ್ಮ ಮುಂಬರುವ KD ಚಿತ್ರದ ‘ಸರ್ಕೆ ಚುನಾರ್’ (Sarke Chunar) ಹಾಡಿನಲ್ಲಿ ಮಹಿಳೆಯರನ್ನು ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ ಎಂಬ ವಿವಾದಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಂಜಯ್ ದತ್ ಅವರು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ (NCW) ಅಧಿಕೃತವಾಗಿ ಕ್ಷಮೆಯಾಚಿಸಿದ್ದಾರೆ. ಕೇವಲ ಕ್ಷಮೆಯಾಚನೆಗೆ ಸೀಮಿತವಾಗದ ನಟ, ಪ್ರಾಯಶ್ಚಿತ್ತವಾಗಿ 50 ಬುಡಕಟ್ಟು ಹೆಣ್ಣುಮಕ್ಕಳ ಸಂಪೂರ್ಣ ಶಿಕ್ಷಣದ ಜವಾಬ್ದಾರಿಯನ್ನು ಹೊರುವುದಾಗಿ ಘೋಷಿಸಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ಸಂಜಯ್ ದತ್ ಅಭಿನಯದ ಹೊಸ ಚಿತ್ರದ ‘ಸರ್ಕೆ ಚುನಾರ್’ ಹಾಡಿನ ಸಾಹಿತ್ಯ ಮತ್ತು ಚಿತ್ರೀಕರಣದ ಬಗ್ಗೆ ಮಹಿಳಾ ಪರ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಈ ಹಾಡು ಮಹಿಳೆಯರ ಘನತೆಗೆ ಧಕ್ಕೆ ತರುವಂತಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗವು ನಟ ಮತ್ತು ಚಿತ್ರತಂಡಕ್ಕೆ ನೋಟಿಸ್ ಜಾರಿ ಮಾಡಿತ್ತು.
ನೋಟಿಸ್‌ಗೆ ಸ್ಪಂದಿಸಿರುವ ಸಂಜಯ್ ದತ್, ಮಹಿಳೆಯರನ್ನು ಗೌರವಿಸುವುದು ತನ್ನ ಮೊದಲ ಆದ್ಯತೆ ಎಂದು ತಿಳಿಸಿದ್ದಾರೆ. “ಯಾವುದೇ ಸಮುದಾಯದ ಅಥವಾ ಮಹಿಳೆಯರ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ನನಗಿರಲಿಲ್ಲ. ಅಜಾಗರೂಕತೆಯಿಂದ ನಡೆದ ಈ ತಪ್ಪಿಗೆ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ” ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ವಿವಾದದ ಹಿನ್ನೆಲೆಯಲ್ಲಿ ಸಾಮಾಜಿಕ ಜವಾಬ್ದಾರಿ ಮೆರೆದಿರುವ ಅವರು, ಮಹಾರಾಷ್ಟ್ರದ ಹಿಂದುಳಿದ ಭಾಗದ 50 ಬುಡಕಟ್ಟು (Tribal) ಹೆಣ್ಣುಮಕ್ಕಳ ಪದವಿವರೆಗಿನ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ‘ಸಂಜಯ್ ದತ್ ಫೌಂಡೇಶನ್’ ಮೂಲಕ ಭರವಸೆ ನೀಡಿದ್ದಾರೆ.








