ಕಾಬೂಲ್: ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವಿನ ಗಡಿ ಸಂಘರ್ಷ ಮತ್ತೆ ಸ್ಫೋಟಗೊಂಡಿದೆ. ಸೋಮವಾರ (ಏಪ್ರಿಲ್ 27, 2026) ಅಫ್ಘಾನಿಸ್ತಾನದ ಕುನಾರ್ ಪ್ರಾಂತ್ಯದ ಮೇಲೆ ಪಾಕಿಸ್ತಾನಿ ಸೇನೆಯು ನಡೆಸಿದ ಕ್ಷಿಪಣಿ ಮತ್ತು ಮೋರ್ಟಾರ್ ದಾಳಿಯಲ್ಲಿ ಕನಿಷ್ಠ 7 ಮಂದಿ ಸಾವನ್ನಪ್ಪಿದ್ದು, 75ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕುನಾರ್ ಪ್ರಾಂತ್ಯದ ರಾಜಧಾನಿ ಅಸದಾಬಾದ್‌ನಲ್ಲಿರುವ ‘ಸೈಯದ್ ಜಮಾಲುದ್ದೀನ್ ಅಫ್ಘಾನಿ ವಿಶ್ವವಿದ್ಯಾಲಯ’ ಮತ್ತು ಸುತ್ತಮುತ್ತಲಿನ ವಸತಿ ಪ್ರದೇಶಗಳ ಮೇಲೆ ಪಾಕಿಸ್ತಾನಿ ಪಡೆಗಳು ಗುಂಡಿನ ದಾಳಿ ನಡೆಸಿವೆ. ದಾಳಿಯ ವೇಳೆ ಸುಮಾರು 30 ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರವು ಈ ದಾಳಿಯನ್ನು “ಕ್ಷಮಿಸಲಾಗದ ಯುದ್ಧಾಪರಾಧ” ಎಂದು ಕರೆದಿದೆ. “ಶಿಕ್ಷಣ ಸಂಸ್ಥೆಗಳು ಮತ್ತು ನಾಗರಿಕರನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನಿ ಮಿಲಿಟರಿ ಆಡಳಿತವು ಬರ್ಬರತೆ ಮೆರೆದಿದೆ” ಎಂದು ತಾಲಿಬಾನ್ ವಕ್ತಾರ ಹಮ್ದುಲ್ಲಾ ಫಿತ್ರತ್ ಕಿಡಿಕಾರಿದ್ದಾರೆ.
ಆದರೆ, ಈ ಆರೋಪಗಳನ್ನು ಪಾಕಿಸ್ತಾನ ಸರ್ಕಾರವು “ಸಂಪೂರ್ಣ ಸುಳ್ಳು” ಎಂದು ತಳ್ಳಿಹಾಕಿದೆ. ತಾವು ಯಾವುದೇ ವಿಶ್ವವಿದ್ಯಾಲಯದ ಮೇಲೆ ದಾಳಿ ಮಾಡಿಲ್ಲ, ಕೇವಲ ಗುಪ್ತಚರ ಮಾಹಿತಿ ಆಧಾರಿತವಾಗಿ ಭಯೋತ್ಪಾದಕ ಅಡಗುತಾಣಗಳ ಮೇಲೆ ಮಾತ್ರ ನಿಖರ ದಾಳಿ ನಡೆಸಿದ್ದೇವೆ ಎಂದು ಇಸ್ಲಾಮಾಬಾದ್ ಹೇಳಿಕೊಂಡಿದೆ.








