ಬೆಂಗಳೂರು: ಮಹಾರಾಷ್ಟ್ರದ ಭಾಗದಲ್ಲಿ ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ಬರುವ ಸಾಂಗ್ಲಿ, ಸತಾರಾ ಮತ್ತು ಕೊಲ್ಲಾಪುರ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಲು ಆ ರಾಜ್ಯದ ಕೊಯ್ನಾ, ರಾಜಾಪುರ ಮತ್ತಿತರ ಅಣೆಕಟ್ಟುಗಳಿಂದ ಒಂದೇ ಸಲ ಅಪಾರ ಪ್ರಮಾಣದ ನೀರನ್ನು ಬಿಡುಗಡೆ ಮಾಡುವುದು ಮತ್ತು ಒತ್ತುವರಿ ಕಾರಣವಾಗಿದೆ. ಇದರಲ್ಲಿ ರಾಜ್ಯದ ಆಲಮಟ್ಟಿ ಮತ್ತು ಹಿಪ್ಪರಗಿ ಅಣೆಕಟ್ಟುಗಳ ಎತ್ತರದ ಪಾತ್ರವೇನೂ ಇಲ್ಲ. ಇದನ್ನು ಆ ರಾಜ್ಯವೇ ನೇಮಿಸಿದ್ದ ತಜ್ಞರ ಸಮಿತಿಯ ವರದಿಯೇ ಸ್ಪಷ್ಟವಾಗಿ ಹೇಳಿದೆ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ಈ ಬಗ್ಗೆ ಭಾನುವಾರ ಮಾಧ್ಯಮ ಪ್ರಕಟಣೆ ನೀಡಿರುವ ಅವರು, ನಾವು ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು 519.60 ಮೀಟರ್‌ನಿಂದ 524.256 ಮೀಟರ್‌ಗೆ ಏರಿಸಲು ಕೃಷ್ಣಾ ನ್ಯಾಯಾಧಿಕರಣವೇ ಅವಕಾಶ ನೀಡಿದೆ. ಇದುವರೆಗೂ ಈ ಬಗ್ಗೆ ಪ್ರಶ್ನಿಸದಿದ್ದ ಮಹಾರಾಷ್ಟ್ರ ಸರಕಾರವು ಈಗ ಅಣೆಕಟ್ಟೆ ಎತ್ತರದ ಹೆಚ್ಚಳಕ್ಕೆ ತಕರಾರು ತೆಗೆದು, ಕೇಂದ್ರಕ್ಕೆ ಪತ್ರ ಬರೆದಿರುವುದು ದುರುದ್ದೇಶದಿಂದ ಕೂಡಿದೆ ಎಂದಿದ್ದಾರೆ.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆ ಸೇರಿದಂತೆ ಹಲವೆಡೆಗಳಲ್ಲಿ 2019ರಲ್ಲಿ ಪ್ರವಾಹ ಉಂಟಾಗಿತ್ತು. ಅದರ ಬಗ್ಗೆ ಅಧ್ಯಯನ ಮಾಡಲು ಮತ್ತು ಭವಿಷ್ಯದಲ್ಲಿ ಪ್ರವಾಹವನ್ನು ತಡೆಯಲು ಏನು ಮಾಡಬೇಕೆಂದು ಸೂಚಿಸುವಂತೆ ತಿಳಿಸಿ ಅಲ್ಲಿನ ರಾಜ್ಯ ಸರಕಾರವು ತನ್ನ ಜಲಸಂಪನ್ಮೂಲ ಇಲಾಖೆಯ ನಿವೃತ್ತ ಪ್ರಧಾನ ಕಾರ್ಯದರ್ಶಿ ನಂದಕುಮಾರ್ ವಡ್ನೇರೆ ಅವರ ನೇತೃತ್ವದಲ್ಲಿ 10 ಸದಸ್ಯರ ಸಮಿತಿ ರಚಿಸಿತ್ತು. 2020ರ ಮೇ ತಿಂಗಳಲ್ಲಿ ವರದಿ ಸಲ್ಲಿಸಿರುವ ಈ ಸಮಿತಿಯು, ತನ್ನ ಭೂಭಾಗದಲ್ಲಿ ಉಂಟಾಗುತ್ತಿರುವ ಪ್ರವಾಹಕ್ಕೆ ಕರ್ನಾಟಕದ ಆಲಮಟ್ಟಿ ಮತ್ತು ಹಿಪ್ಪರಗಿ ಅಣೆಕಟ್ಟುಗಳ ಹಿನ್ನೀರು ಕಾರಣವಲ್ಲ. ಅಷ್ಟೇ ಅಲ್ಲದೆ, ಈ ಎರಡೂ ಅಣೆಕಟ್ಟುಗಳ ಹಿನ್ನೀರು ಕರ್ನಾಟಕದೊಳಗೆ ನಿಲ್ಲುತ್ತವೆ. ಮಹಾರಾಷ್ಟ್ರದ ಭೂಪ್ರದೇಶ ಮುಳುಗಡೆ ಆಗುವುದಿಲ್ಲ ಎಂದು ಹೇಳಿದೆ ಎಂದು ಅವರು ತಿಳಿಸಿದ್ದಾರೆ.
ಆಲಮಟ್ಟಿ ಅಣೆಕಟ್ಟಿಯಿಂದ ಸಾಂಗ್ಲಿಯು 260 ಕಿ.ಮೀ. ದೂರದಲ್ಲಿದೆ. ಹಿಪ್ಪರಗಿ ಹಿನ್ನೀರಿನ ವ್ಯಾಪ್ತಿ ಕೂಡ ರಾಜಾಪುರ ಬ್ಯಾರೇಜ್‌ನಿಂದ ಕೆಳಕ್ಕೆ 22ನೇ ಕಿ.ಮೀ. ನಲ್ಲಿ ಕಂಡುಬರುತ್ತದೆ. ಮಹಾರಾಷ್ಟ್ರದಲ್ಲಿ ಕೊಯ್ನಾ ಅಣೆಕಟ್ಟು, ರಾಜಾಪುರ ಬ್ಯಾರೇಜ್ ಇತ್ಯಾದಿಗಳಿಂದ ಹಂತಹಂತವಾಗಿ ನೀರು ಬಿಡದೆ, ಸಂಪೂರ್ಣ ತುಂಬಿದ ಬಳಿಕ ಒಂದೇ ಸಲ ಲಕ್ಷಾಂತರ ಕ್ಯೂಸೆಕ್ಸ್ ನೀರನ್ನು ನದಿ ಪಾತ್ರಕ್ಕೆ ಬಿಡುವುದರಿಂದ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ಈ ಹಂತದಲ್ಲಿ ಅದು ಯಾವುದೇ ಮುಂಜಾಗ್ರತಾ ಕ್ರಮವನ್ನು ವಹಿಸಿರುವ ಇತಿಹಾಸವೇ ಇಲ್ಲ ಎಂದು ಆ ವರದಿಯೇ ಹೇಳಿದೆ. ಈ ವಿಚಾರವನ್ನು ಸಮಿತಿಯು 2019ರ ಆ.4ರಂದು ಅಲ್ಲಿನ ಮುಖ್ಯಮಂತ್ರಿಗಳಿಗೂ ಪತ್ರ ಬರೆದು ತಿಳಿಸಿದೆ ಎಂದು ಅವರು ವಿವರಿಸಿದ್ದಾರೆ.
ಇದೇ ವಿಚಾರವಾಗಿ 2019ರ ಆಗಸ್ಟ್‌ನಲ್ಲಿ ಮಹಾರಾಷ್ಟ್ರದವರೇ ಆದ ಡಾ.ಅಮೋಲ್ ಪವಾರ್ ಎನ್ನುವವರು ಸುಪ್ರೀಂಕೋರ್ಟಿನಲ್ಲಿ ರಿಟ್ ಅರ್ಜಿ ಹಾಕಿದರು. ಪ್ರವಾಹ ಪರಿಸ್ಥಿತಿಯನ್ನು ತಪ್ಪಿಸಲು ಮಹಾರಾಷ್ಟ್ರ ಮತ್ತು ಕರ್ನಾಟಕ ಎರಡೂ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಬೇಕೆಂದು ಕೇಂದ್ರ ಸರಕಾರಕ್ಕೆ ಹೇಳಬೇಕೆಂದು ಅವರು ಕೋರಿದ್ದರು. ಇದಕ್ಕೆ ನಾವೂ ಉತ್ತರ ಕೊಟ್ಟಿದ್ದೆವು. ಏತನ್ಮಧ್ಯೆ, ಅರ್ಜಿದಾರರು ತಮ್ಮ ರಿಟ್ ಅನ್ನು ವಾಪಸ್ ತೆಗೆದುಕೊಂಡರು ಎಂದು ಪಾಟೀಲ ಮಾಹಿತಿ ನೀಡಿದ್ದಾರೆ.
ಆಲಮಟ್ಟಿ ಅಣೆಕಟ್ಟೆ ಎತ್ತರ ಏರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಯಾವ ವಿವಾದವೂ ಇಲ್ಲ. ಅದು ನ್ಯಾಯಾಧಿಕರಣದ ಮುಂದೆಯೇ ಬಗೆಹರಿದು ಹೋಗಿದೆ. ಈಗ ಇದ್ದಕ್ಕಿದ್ದಂತೆ ಮಹಾರಾಷ್ಟ್ರ ತಗಾದೆ ತೆಗೆದಿರುವುದು ಸರಿಯಲ್ಲ. ಪ್ರವಾಹದಂತಹ ಪರಿಸ್ಥಿತಿಯನ್ನು ಈಗಲೂ ಎರಡೂ ರಾಜ್ಯಗಳ ನಡುವೆ ಇರುವ, ಮೂರು ಸ್ತರಗಳ ʻಅಂತರರಾಜ್ಯ ಪ್ರವಾಹ ಸಮನ್ವಯ ಸಮಿತಿʼಯ ಮೂಲಕವೇ ಸುಗಮವಾಗಿ ನಿರ್ವಹಿಸಬಹುದು. ಆದರೆ, ಮಹಾರಾಷ್ಟ್ರವು ಕೆಟ್ಟ ರಾಜಕಾರಣಕ್ಕೆ ಮುಂದಾಗಿದೆ. ಏನಾದರೂ ಮಾಡಿ ಕರ್ನಾಟಕದ ಹಿತಕ್ಕೆ ಅಡ್ಡಗಾಲಾಗಬೇಕು ಎನ್ನುವುದೊಂದೇ ಅದರ ಉದ್ದೇಶವಾಗಿದೆ. ಹೀಗಾಗಿಯೇ ಅಲ್ಲಿನ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಕೇಂದ್ರ ಜಲಶಕ್ತಿ ಸಚಿವ ಸಿ ಆರ್ ಪಾಟೀಲ್ ಅವರಿಗೆ ಕರ್ನಾಟಕದ ವಿರುದ್ಧ ಪತ್ರ ಬರೆದಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
ರಾಹುಲ್ ಗಾಂಧಿಗೆ MLC ಛಲವಾದಿ ನಾರಾಯಣಸ್ವಾಮಿ ಪತ್ರ: ನನ್ನ ಪ್ರಶ್ನೆಗಳಿಗೆ ಉತ್ತರ ನೀಡಿಯೆಂದು ಆಗ್ರಹ
BREAKING: ಆಂಧ್ರಪ್ರದೇಶದಲ್ಲಿ ಗ್ರಾನೈಟ್ ಕ್ವಾರಿಯಲ್ಲಿ ಕಲ್ಲು ಕುಸಿದುಬಿದ್ದು 6 ಕಾರ್ಮಿಕರು ದುರ್ಮರಣ