ಬೆಂಗಳೂರು: ಉತ್ಪಾದನಾ ವೆಚ್ಚಕ್ಕೆ ಶೇಕಡಾ ಐವತ್ತು ರಷ್ಟು ಸೇರಿಸಿ ಕನಿಷ್ಟ ಬೆಂಬಲ ಬೆಲೆ ನಿಗದಿಗೆ ಕಾನೂನು ರಕ್ಷಣೆ ಸೇರಿದಂತೆ ಐತಿಹಾಸಿಕ ದೆಹಲಿ ರೈತ ಹೋರಾಟದ ಸಂದರ್ಭದಲ್ಲಿ ನೀಡಿದ್ದ ಲಿಖಿತ ಭರವಸೆಗಳನ್ನು ಈಡೇರಿಸಲು ಒತ್ತಾಯಿಸಿ ದೆಹಲಿ ಚಲೋ ಹಮ್ಮಿಕೊಂಡಿದ್ದ ರೈತರ ಮೇಲೆ ಮೋದಿ ಸರ್ಕಾರ ಎಸಗಿರುವ ಪೈಶಾಚಿಕ ದೌರ್ಜನ್ಯ ಖಂಡಿಸಿ ಪೆಬ್ರವರಿ 16,2024 ರಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಸಂಯುಕ್ತ ಹೋರಾಟ ಕರ್ನಾಟಕ ತನ್ನ ಎಲ್ಲಾ ಸಹಭಾಗಿ ಸಂಘಟನೆಗಳಿಗೆ ಕರೆ ನೀಡಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿಯುತವಾಗಿ ಪ್ರತಿಭಟಿಸುವುದು ದೇಶದ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕಾಗಿದೆ. ರೈತರ ಶಾಂತಿಯುತ ಹೋರಾಟದ ಮೇಲೆ ಪೊಲೀಸ್ ಹಾಗೂ ಸಶಸ್ತ್ರ ಭದ್ರತಾ ಪಡೆಗಳನ್ನು ಛೂ ಬಿಟ್ಟಿರುವುದಲ್ಲದೇ,ಲಾಠಿ ಪ್ರಹಾರ,ರಬ್ಬರ್ ಬುಲೆಟ್ , ಆಶ್ರುವಾಯು ಸಿಡಿತದಂತಹ ಪೈಶಾಚಿಕ ದೌರ್ಜನ್ಯವನ್ನು ರೈತರ ಮೇಲೆ ಎಸಗಿರುವುದನ್ನು ಸಂಯುಕ್ತ ಹೋರಾಟ ಕರ್ನಾಟಕ ತೀವ್ರವಾಗಿ ಖಂಡಿಸುತ್ತದೆ.
ತಡೆಯಲ್ಪಟ್ಟ ಸ್ಥಳದಲ್ಲೇ ಠಿಕಾಣಿ ಹೂಡಿ ನಿದ್ರಿಸುತ್ತಿದ್ದ ಮಧ್ಯ ರಾತ್ರಿ ಸಮಯದಲ್ಲಿ ರೈತರ ಮೇಲೆ ಡ್ರೋನ್ ಬಳಸಿ ಅಶ್ರುವಾಯು ಶೆಲ್ ಗಳ ಸುರಿಮಳೆ ನಡೆಸಿರುವುದು ಅತ್ಯಂತ ಅಘಾತಕಾರಿಯಾದ ಘಟನೆಯಾಗಿದ್ದು ದೇಶದ ಅನ್ನದಾತರನ್ನು ಸರ್ಕಾರದ ಅಥವಾ ದೇಶದ ಶತೃಗಳು ಎಂಬಂತೆ ನರೇಂದ್ರ ಮೋದಿ ಸರ್ಕಾರ ಪರಿಗಣಿಸಿ ನಡೆಸಿಕೊಂಡಿದೆ. ತಮ್ಮ ಜ್ವಲಂತ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟಿಸಲೇಬೇಕಾದ ಆನಿವಾರ್ಯತೆಗೆ ಒಳಗಾದ ರೈತರ ಹೋರಾಟವನ್ನು ಕ್ರೂರವಾಗಿ ದಮನಿಸುವುದು ಪ್ಯಾಸಿಸ್ಟ್ ಸರ್ವಾಧಿಕಾರವಾಗಿದೆ ಎಂದು ಸಂಯುಕ್ತ ಹೋರಾಟ ಕರ್ನಾಟಕ ಕಟುವಾಗಿ ಟೀಕಿಸುತ್ತದೆ.
ದೆಹಲಿ ಚಲೋ ಪ್ರತಿಭಟನೆಯನ್ನು ನಡೆಸುವ ರೈತರ ಹಕ್ಕನ್ನು ರಕ್ಷಿಸಬೇಕು, ಕೂಡಲೇ ರೈತರ ಪ್ರತಿಭಟನೆ ಹತ್ತಿಕ್ಕಲು ಜಮೆ ಮಾಡಿರುವ ಎಲ್ಲಾ ಪಡೆಗಳನ್ನು ವಾಪಸ್ಸು ಕರೆಸಿಕೊಳ್ಳಬೇಕು ಮತ್ತು ರೈತರ ಹಾಗೂ ಕಾರ್ಮಿಕರ ಹೋರಾಟವನ್ನು ಹಾಗೂ ಅವರ ನ್ಯಾಯಯುತ ಆಗ್ರಹಗಳನ್ನು ಮಾತುಕತೆಯ ಮೂಲಕ ಇತ್ಯರ್ಥ ಪಡಿಸಬೇಕು ಎಂದು ಸಂಯುಕ್ತ ಹೋರಾಟ ಕರ್ನಾಟಕ ಪ್ರಧಾನಿ ನರೇಂದ್ರ ಮೋದಿ ರವರನ್ನು ಹಾಗೂ ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತದೆ.
ದಿನೇಶ್ ಶಿರುವಾಳ, ಜಿಲ್ಲಾ ರೈತ ಸಂಘದ ಅಧ್ಯಕ್ಷರು, ರವಿ ಕುಗ್ವೆ, ಚಾರ್ವಾಕ ರಾಘು, ಸಂಚಾಲಕರು, ಸಂಯುಕ್ತ ಹೋರಾಟ ಕರ್ನಾಟಕ
ಬೆಂಗಳೂರು ‘ಶಿಕ್ಷಕರ ಕ್ಷೇತ್ರ’ದ ಉಪಚುನಾವಣೆ: ‘ಶಿಕ್ಷಕ ಮತದಾರ’ರಿಗೆ ಫೆ.16ರಂದು ‘ಸಾಂದರ್ಭಿಕ ರಜೆ’ ಮಂಜೂರು