ಶಿವಮೊಗ್ಗ: ಬೇಸಿಗೆ ಆರಂಭವಾಗುತ್ತಿದ್ದಂತೆ ರಾಜ್ಯದಲ್ಲಿ ಅಸಮರ್ಪಕ ವಿದ್ಯುತ್ ಪೂರೈಕೆ, ಕಣ್ಣಾಮುಚ್ಚಾಲೆ ಆಟ ಶುರುವಾಗಿದೆ. ಗ್ರಾಮೀಣ ಭಾಗಗಳಲ್ಲಿ ಅಂತೂ ಇದು ತುಸು ಹೆಚ್ಚು. ಹೀಗಾಗಿಯೇ ಸಾಗರದ ಆವಿನಹಳ್ಳಿ ಗ್ರಾಮಸ್ಥರು ಅಸಮರ್ಪಕ ವಿದ್ಯುತ್ ಪೂರೈಕೆ ವಿರುದ್ಧ ಸಿಡಿದೆದ್ದಿದ್ದಾರೆ. ಫೆಬ್ರವರಿ.24ರಂದು ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆಗೂ ನಿರ್ಧರಿಸಿದ್ದಾರೆ.
ಇಂದು ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಅವಿನಹಳ್ಳಿಯ ಲೋಕೇಶ್ ಹುಣಾಲುಮಡಿಕೆ ಅವರು, ಕಳೆದ ತಿಂಗಳಿಂದ ಆವಿನಹಳ್ಳಿ ಕೋಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿರಂತರವಾಗಿ ವಿದ್ಯುತ್ ಅಡಚಣೆ ಆಗುತ್ತಿದೆ. ಇದರಿಂದ ಕೃಷಿ ಸೇರಿದಂತೆ ಇತರೆ ಚಟುವಟಿಕೆಗೆ ಅಡ್ಡಿಯಾಗುತ್ತಿದೆ. ವಿದ್ಯುತ್ ಸಮರ್ಪಕ ಪೂರೈಕೆ ಇಲ್ಲದೇ ನೀರಿಗೂ ಆಹಾಕಾರ ಏಳುವಂತ ಪರಿಸ್ಥಿತಿ ನಿರ್ಮಾಣವಾಗುವ ಹಂತವನ್ನ ತಲುಪಿದೆ ಎಂಬುದಾಗಿ ಆಕ್ರೋಶ ಹೊರ ಹಾಕಿದ್ದಾರೆ.
ಈ ಸಂಬಂಧ ಮೆಸ್ಕಾಂ ಅಧಿಕಾರಿಗಳೊಂದಿಗೆ ಸಾಕಷ್ಟು ಬಾರಿ ಸಮಸ್ಯೆ ಸರಿಪಡಿಸುವಂತೆ ಮನವಿ ಮಾಡಲಾಗಿತ್ತು. ಪದೇ ಪದೇ ಕಾಲಾವಕಾಶ ಕೇಳಿದ್ದರು. ಅವರು ತಿಂಗಳು ಗಟ್ಟಲೆ ಕಾಲವಕಾಶ ನೀಡಿದರೂ ಇದುವರೆಗೂ ಸಮರ್ಪಕ ವಿದ್ಯುತ್ ಪೂರೈಸುವಂತ ಕೆಲಸ ಮಾಡಿಲ್ಲ. ಹೀಗಾಗಿ ರೈತರು, ಕೂಲಿಕಾರ್ಮಿಕರು ಪರದಾಡುವಂತಾಗಿದೆ ಎಂದಿದ್ದಾರೆ.
ಆದ್ದರಿಂದ ದಿನಾಂಕ 24-02-2026ರ ಮಂಗಳವಾರ ಬೆಳಗ್ಗೆ 10 ಗಂಟೆಗೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆವಿನಹಳ್ಳಿ ಮೆಸ್ಕಾಂ ಕಛೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಆವಿನಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು, ರೈತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಪ್ರತಿಭಟನೆ ಯಶಸ್ವಿಗೊಳಿಸುವಂತೆ ಕರೆ ನೀಡಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ದೇವೇಗೌಡರು, ಕುಮಾರಸ್ವಾಮಿ ಒಕ್ಕಲಿಗರನ್ನು ಬೆಳೆಸಿಲ್ಲವೆಂದ ಸಿದ್ಧರಾಮಯ್ಯಗೆ HDK ಈ ತಿರುಗೇಟು








