ಚಾಮರಾಜನಗರ: ಬಂಡೀಪುರ, ಮೈಸೂರು ಜಿಲ್ಲೆಯಲ್ಲಿ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚುತ್ತಿದ್ದು, ಇದು ತಹಬಂದಿಗೆ ಬಾರದಿದ್ದರೆ ಸಫಾರಿಯನ್ನು ಸಂಪೂರ್ಣ ಬಂದ್ ಮಾಡುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಎಚ್ಚರಿಕೆ ನೀಡಿದ್ದಾರೆ.
ಚಾಮರಾಜನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಅರಣ್ಯ, ಕಂದಾಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ವನ್ಯಜೀವಿ- ಮಾನವ ಸಂಘರ್ಷ ಇರುವ ಸ್ಥಳದಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಲು ಸಿಬ್ಬಂದಿ ಕೊರತೆ ಎನ್ನುತ್ತೀರಿ. ಹಾಗಾದರೆ ಸಫಾರಿಗೆ ನಿಯೋಜಿಸಿರುವ ಸಿಬ್ಬಂದಿಯನ್ನೇ ಅಲ್ಲಿಗೆ ನಿಯೋಜಿಸಬೇಕಾಗುತ್ತದೆ ಎಂದು ಹೇಳಿದರು.
ಮಾನವ-ವನ್ಯಜೀವಿ ಸಂಘರ್ಷ ತಪ್ಪಿಸಲು ಅರಣ್ಯ ಇಲಾಖೆ ಕಂದಾಯ ಮತ್ತು ಪೊಲೀಸ್ ಇಲಾಖೆಯೊಂದಿಗೆ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ಸಮನ್ವಯದ ಕೊರತೆ, ಪರಸ್ಪರ ದೋಷಾರೋಪವನ್ನು ಸರ್ಕಾರ ಕ್ಷಮಿಸುವುದಿಲ್ಲ ಸಬೂಬುಗಳಿಗೆ ಅವಕಾಶವಿಲ್ಲ. ಎಲ್ಲ ಇಲಾಖೆಗಳೂ ಜೊತೆಗೂಡಿ ಮಾನವ- ವನ್ಯಜೀವಿ ಸಂಘರ್ಷ ನಿಯಂತ್ರಿಸಬೇಕು ಎಂದು ಸೂಚಿಸಿದರು.
ಆನೆ, ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಇದು ನಿಮಗೂ ತಿಳಿದಿದೆ. ಹೆಚ್ಚುತ್ತಿರುವ ಪ್ರಾಣಿಗಳಿಗೆ ಅನುಗುಣವಾಗಿ ಅರಣ್ಯ ಪ್ರದೇಶ ಹೆಚ್ಚಳ ಮಾಡಲು ಸಾಧ್ಯವಿಲ್ಲ. ಆದರೆ ಇರುವ ಕಾಡಿನಲ್ಲೇ ವನ್ಯಜೀವಿಗಳಿಗೆ ಸೂಕ್ತ ಆಹಾರ ಸಿಗುವಂತೆ ಮಾಡಲು ಕಾರ್ಯಯೋಜನೆ ರೂಪಿಸಿ ಎಂದು ಸ್ಪಷ್ಟ ಸೂಚನೆ ನೀಡಿದರು.
ಮಾಂಸಹಾರಿ ಕಾಡು ಪ್ರಾಣಿಗಳಿಗೆ ಕಾಡಿನೊಳಗೆ ಜಿಂಕೆ, ಕಡವೆ ಇತ್ಯಾದಿ ಲಭಿಸಬೇಕಾದರೆ, ಸಸ್ಯಹಾರಿ ಪ್ರಾಣಿಗಳಿಗೆ ಹುಲ್ಲು, ಸೊಪ್ಪು ಲಭ್ಯವಾಗಬೇಕು. ಈ ನಿಟ್ಟಿನಲ್ಲಿ ಅರಣ್ಯಾಧಿಕಾರಿಗಳು ಲಾಂಟನಾ, ಸನ್ನಾ ಇತ್ಯಾದಿ ಕಳೆ ತೆಗೆದು ಹೆಚ್ಚು ಸೊಪ್ಪು, ಹುಲ್ಲು ಲಭಿಸುವಂತೆ ಮಾಡಬೇಕು ಎಂದು ಸೂಚಿಸಿದರು.
ಇತ್ತೀಚೆಗೆ ಸರಗೂರಿನಲ್ಲಿ ಮೃತಪಟ್ಟ ವ್ಯಕ್ತಿಯ ಪಾರ್ಥಿವ ಶರೀರದ ಮರಣೋತ್ತರ ಪರೀಕ್ಷೆಯನ್ನು ಸರಗೂರು ಅಥವಾ ಎಚ್.ಡಿ.ಕೋಟೆ ಇಲ್ಲವೆ ನಂಜನಗೂಡಿನಲ್ಲಿ ಮಾಡಿಸಬಹುದಾಗಿತ್ತು. ಮೈಸೂರಿಗೆ ತರುವ ಅಗತ್ಯವೇನಿತ್ತು. ಅನಗತ್ಯವಾಗಿ ಸರ್ಕಾರದ ಮೇಲೆ ಸಚಿವರ ಮೇಲೆ ಆರೋಪ ಬರುವಂತೆ ಮಾಡಬೇಡಿ. ಪ್ರಾಮಾಣಿಕವಾಗಿ ಮತ್ತು ದಕ್ಷತೆಯಿಂದ ಕಾರ್ಯ ನಿರ್ವಹಿಸಿ ಎಂದರು.
ಮಾನವ-ವನ್ಯಜೀವಿ ಸಂಘರ್ಷದಲ್ಲಿ ಯಾರೂ ಮೃತಪಡುವುದು ಬೇಡ. ಒಂದೊಮ್ಮೆ ಯಾರಾದರೂ ಮೃತಪಟ್ಟರೆ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು. ತ್ವರಿತವಾಗಿ ಮರಣೋತ್ತರ ಪರೀಕ್ಷೆ ನಡೆಸಿ ಮೃತರ ಕುಟುಂಬಕ್ಕೆ ಆದಷ್ಟು ಶೀಘ್ರ ಪಾರ್ಥಿವ ಶರೀರ ಒಪ್ಪಿಸಿ, ಅಂತ್ಯಕ್ರಿಯೆ ಆಗುವವರೆಗೂ ಇದ್ದು ಪರಿಸ್ಥಿತಿ ನಿಯಂತ್ರಣದಲ್ಲಿಡಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಸಚಿವರಾದ ಕೆ. ವೆಂಕಟೇಶ್, ಡಾ. ಎಚ್.ಸಿ. ಮಹದೇವಪ್ಪ, ಶಾಸಕರುಗಳಾದ ಪುಟ್ಟರಂಗಶೆಟ್ಟಿ, ಎ.ಆರ್. ಕೃಷ್ಣಮೂರ್ತಿ, ಎಂ.ಆರ್. ಮಂಜುನಾಥ್, ಎಚ್.ಎಂ. ಗಣೇಶ್ ಪ್ರಸಾದ್, ದರ್ಶನ್ ಧ್ರುವ ನಾರಾಯಣ್ ಹಾಗೂ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳು, ಮೈಸೂರು, ಚಾಮರಾಜನಗರ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಉನ್ನತಾಧಿಕಾರಿಗಳು ಪಾಲ್ಗೊಂಡಿದ್ದರು.
ಮಾನವ ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕೆ 8 ಅಂಶದ ಕಾರ್ಯಯೋಜನೆ
ಚಾಮರಾಜನಗರ, ನ.2: ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ 8 ಅಂಶಗಳ ಕಾರ್ಯಯೋಜನೆಯನ್ನು ಸೂಚಿಸಿದ್ದಾರೆ.
• ಮಾನವ ವನ್ಯಜೀವಿ ಸಂಘರ್ಷ ಇರುವ ಪ್ರದೇಶಗಳನ್ನು ಗುರುತಿಸಬೇಕು ಮತ್ತು ಯಾವ ಸ್ವರೂಪದ ಸಮಸ್ಯೆ ಸಂಘರ್ಷ ಇದೆ ಎಂದು ಪಟ್ಟಿ ಮಾಡಬೇಕು.
• ಮಾನವ ಸಂಪನ್ಮೂಲದ ಸಮರ್ಪಕ ನಿರ್ವಹಣೆ ಮಾಡಬೇಕು. ಸಂಘರ್ಷದ ತೀವ್ರತೆಯ ಆಧಾರದ ಮೇಲೆ ಅಧಿಕಾರಿ ಸಿಬ್ಬಂದಿಯನ್ನು ನಿಯೋಜನೆ ಮಾಡಬೇಕು. ಅಗತ್ಯ ಬಿದ್ದರೆ ಸಮೀಪದ ವಲಯದ ಅಧಿಕಾರಿ ಸಿಬ್ಬಂದಿಯನ್ನೂ ನಿಯೋಜಿಸಬೇಕು.
• ಗಸ್ತು ಹೆಚ್ಚಿಸಬೇಕು. ಗಸ್ತು ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಬೇಕು. ಅರಣ್ಯದ ಅಂಚಿನ ಗ್ರಾಮಗಳಲ್ಲಿ ಗಸ್ತು ಹೆಚ್ಚಳ ಮಾಡಿ, ಗಸ್ತು ರಿಜಿಸ್ಟರ್ ನಿರ್ವಹಣೆ ಮಾಡಬೇಕು.
• ಹಿರಿಯ ಅಧಿಕಾರಿಗಳು ನಿಯಮಿತವಾಗಿ ಅರಣ್ಯದಂಚಿನ ಅದರಲ್ಲೂ ಮಾನವ-ವನ್ಯಜೀವಿ ಸಂಘರ್, ಇರುವ ಗ್ರಾಮದಲ್ಲಿ ವಾಸ್ತವ್ಯ ಮಾಡಿ, ಸಮಸ್ಯೆ ಪರಿಹರಿಸಬೇಕು.
• ಸ್ಥಳೀಯರ ಬೆಂಬಲ ಇಲ್ಲದೆ ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಣ ಅಸಾಧ್ಯ. ಈ ನಿಟ್ಟಿನಲ್ಲಿ ಅರಣ್ಯದಂಚಿನ ಗ್ರಾಮಗಳ ಉತ್ಸಾಹಿ ಯುವಕರು ಮತ್ತು ಹಿರಿಯರನ್ನು ಗುರುತಿಸಿ ಅವರಿಗೆ ಅರಣ್ಯ ಮಿತ್ರ ಎಂದು ಪರಿಗಣಿಸಿ ಗಸ್ತು, ವನ್ಯಜೀವಿ ಸೆರೆ ಕಾರ್ಯಾಚರಣೆ ವೇಳೆ ಅವರ ಸೇವೆ ಬಳಸಿಕೊಳ್ಳಬೇಕು.
• ವನ್ಯಜೀವಿ ಸಂರಕ್ಷಣೆ ಕಾರ್ಯಾಚರಣೆ, ವನ್ಯಜೀವಿಗಳು ಸಂಚರಿಸುವ ಗ್ರಾಮದ ಬಳಿ 24×7 ವಾಹನ ಮತ್ತು ಸಿಬ್ಬಂದಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು.
• ವನ್ಯಜೀವಿ ಸೆರೆ, ವನ್ಯಜೀವಿ ದಾಳಿ ಮಾಡಿದಾಗ ಏನು ಮಾಡಬೇಕು, ವನ್ಯಜೀವಿ ಕಾಣಿಸಿಕೊಂಡಾಗ ಯಾವ ರೀತಿ ಸ್ಪಂದಿಸಬೇಕು ಎಂಬ ಬಗ್ಗೆ ಗ್ರಾಮದ ಯುವಕರಿಗೆ ಮತ್ತುಮಕ್ಕಳಿಗೆ ಅಣಕು ಪ್ರದರ್ಶನಗಳ ಮೂಲಕ ಜಾಗೃತಿ ಮೂಡಿಸಬೇಕು.
• ಜಿಲ್ಲಾ ಮಟ್ಟದಲ್ಲಿ ಸಮನ್ವಯ ಸಮಿತಿ ರಚಿಸಬೇಕು ಮತ್ತು ತಾಲೂಕು ಮಟ್ಟದಲ್ಲಿ ಉಪ ಸಮಿತಿ ರಚಿಸಿ ವಿವಿಧ ಇಲಾಖೆಗಳ ನಡುವೆ ಸಮನ್ವಯತೆ ಕಾಯ್ದುಕೊಳ್ಳಬೇಕು. ಈ ಸಮಿತಿ ನಿಯಮಿತವಾಗಿ ಸಭೆ ನಡೆಸಿ ಮಾನವ ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕೆ ಶ್ರಮಿಸಬೇಕು.
ನ.4ರಿಂದ ಎಂಬಿಎ, ಎಂಸಿಎ ಪ್ರವೇಶಕ್ಕೆ 3ನೇ ಸುತ್ತಿನ ಕೌನ್ಸೆಲಿಂಗ್ ಆರಂಭ: KEA
ರಾಜ್ಯದ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್ : ನ.19 ರಂದು `ಅಕ್ಕ ಪಡೆ’ಗೆ ಚಾಲನೆ.!








