ಬೀದರ್ : ಬೀದರ್ ನ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಸಚಿವ ಪ್ರಿಯಾಂಕ ಖರ್ಗೆ ಆಪ್ತ ಎನಲಾದ ರಾಜು ಕಪನೂರನನ್ನು 5 ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡಿ ಬೀದರ್ ನ ಜೆಎಂಎಫ್‌ಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಹೌದು ಬೀದರ್‌ನ ಯುವ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣದಲ್ಲಿ, ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ರಾಜು ಕಪನೂರ್ ಸೇರಿದಂತೆ ಐವರನ್ನು ಬೀದರ್ ಜೆಎಂಎಫ್‌ಸಿ ನ್ಯಾಯಾಲಯ 5 ದಿನಗಳ ಸಿಐಡಿ ಕಸ್ಟಡಿಗೆ ನೀಡಿದೆ.ಸಿಐಡಿ ತನಿಖೆ ಭರದಿಂದ ಸಾಗಿದ್ದು, ಡೆತ್ ನೋಟ್‌ನಲ್ಲಿ ಹೆಸರಿಸಲಾದ ಎಂಟು ಜನರ ಪೈಕಿ ಐವರನ್ನು ಬಂಧಿಸಲಾಗಿದೆ. ಉಳಿದ ಮೂವರನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಯುತ್ತಿದೆ.
2024 ಡಿಸೆಂಬರ್ 26 ರಂದು ಬೀದರ್ ನಗರದ ಬಸವೇಶ್ವರ ವೃತ್ತದ ಬಳಿಯ ರೈಲು ಹಳಿಗೆ ತಲೆಕೊಟ್ಟು ಯುವ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಚಿನ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸುಮಾರು ಏಳು ಪುಟಗಳ ಡೆತ್ನೋಟ್ ಬರೆದಿಟ್ಟಿದ್ದರು. ಡೆತ್ನೋಟ್ನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಜ್ ಖರ್ಗೆ ಆಪ್ತ ರಾಜು ಕಪನೂರ್ ಆ್ಯಂಡ್ ಗ್ಯಾಂಗ್ನ ಎಂಟು ಸದಸ್ಯರ ಹೆಸರು ಇತ್ತು. ಈ ಆತ್ಮಹತ್ಯೆ ಪ್ರಕರಣ ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗಿತ್ತು.
ಈ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿದ ಸರಕಾರ ಸಿಐಡಿ ತನಿಖೆಗೆ ಆದೇಶ ಮಾಡಿತ್ತು. ಸಿಐಡಿ ಡಿವೈಸ್ ಎಸ್ಪಿ ಸುಲೇಮಾನ್ ತಹಶಿಲ್ದಾರ್ ನೆತೃತ್ವದ ಅಧಿಕಾರಿಗಳ ತಂಡ ಬೀದರ್ನಲ್ಲಿ ಬೀಡು ಬಿಟ್ಟು ಎಲ್ಲ ಆಯಾಮಗಳಲ್ಲಿ ಪ್ರಕರಣದ ತನಿಖೆ ನಡೆಸುತ್ತಿದೆ. ಸದ್ಯ ಆರೋಪಿಗಳಾದ ರಾಜು ಕಪನೂರ್, ಘೋರಕ್ನಾಥ್, ಸತೀಶ್, ನಂದಕುಮಾರ್ ನಾಗಭುಂಜಗೆ, ರಾಮಾಗೌಡ ಪಾಟೀಲ್ ಸಿಐಡಿ ಕಸ್ಟಡಿಯಲ್ಲಿದ್ದು, ವಿಚಾರಣೆ ಎದುರಿಸುತ್ತಿದ್ದಾರೆ. ಎಂಟು ಜನರ ಪೈಕಿ ಐವರ ಬಂಧನವಾಗಿದ್ದು, ಇನ್ನೂ ಮೂವರಿಗಾಗಿ ಸಿಐಡಿಯಿಂದ ಶೋಧ ನಡೆಸುತ್ತಿದೆ.