ಲಕ್ನೋ:ಉತ್ತರ ಪ್ರದೇಶದಲ್ಲಿ ಕಳೆದ 36 ರಿಂದ 48 ಗಂಟೆಗಳಲ್ಲಿ ಸುರಿದ ಭಾರೀ ಮಳೆ ಮತ್ತು ಗುಡುಗು ಸಹಿತ ಚಂಡಮಾರುತಕ್ಕೆ ಇದುವರೆಗೆ ಕನಿಷ್ಠ 104 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಭೀಕರ ನೈಸರ್ಗಿಕ ವಿಕೋಪಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಪುಟಿನ್, “ಉತ್ತರ ಪ್ರದೇಶದಲ್ಲಿ ಚಂಡಮಾರುತದಿಂದ ಉಂಟಾದ ಸಾವು-ನೋವು ಮತ್ತು ಅಪಾರ ಹಾನಿಯ ಬಗ್ಗೆ ನಮ್ಮ ಆಳವಾದ ಸಂತಾಪಗಳನ್ನು ಸ್ವೀಕರಿಸಿ. ಮೃತರ ಕುಟುಂಬದವರಿಗೆ ನನ್ನ ಸಹಾನುಭೂತಿ ತಿಳಿಸಿ ಹಾಗೂ ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ” ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಪರಿಹಾರ ಕಾರ್ಯದರ್ಶಿ ಹರಿಕೇಶ್ ಭಾಸ್ಕರ್ ಅವರ ಪ್ರಕಾರ, ರಾಜ್ಯದ ವಿವಿಧ ಭಾಗಗಳಲ್ಲಿ ಸಿಡಿಲು ಮತ್ತು ಚಂಡಮಾರುತಕ್ಕೆ 104 ಜನರು ಬಲಿಯಾಗಿದ್ದಾರೆ. ಬಾರಾಬಂಕಿ, ಬಹ್ರೈಚ್, ಕಾನ್ಪುರ ದೇಹತ್, ಬಸ್ತಿ, ಸಂಭಲ್, ಹರ್ದೋಯ್ ಮತ್ತು ಉನ್ನಾವೊ ಸೇರಿದಂತೆ 19 ಜಿಲ್ಲೆಗಳಲ್ಲಿ ಹೆಚ್ಚಿನ ಹಾನಿಯಾಗಿದೆ.
ಈ ವಿಕೋಪದಲ್ಲಿ 130 ಜಾನುವಾರುಗಳು ಮೃತಪಟ್ಟಿದ್ದು, 98 ಮನೆಗಳು ಜಖಂಗೊಂಡಿವೆ ಎಂದು ವರದಿಯಾಗಿದೆ.ಮೃತರ ಕುಟುಂಬಗಳಿಗೆ ತಕ್ಷಣವೇ ಪರಿಹಾರ ನೀಡುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಪ್ರತಿ 3 ಗಂಟೆಗೊಮ್ಮೆ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡುವಂತೆ ಮತ್ತು ಪರಿಹಾರ ಕಾರ್ಯಗಳಿಗೆ ಮೊದಲ ಆದ್ಯತೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.








