ಮುಂಬೈ: ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಯುದ್ಧದ ಭೀತಿಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಗಗನಕ್ಕೇರಿದ್ದು, ಇದರ ನೇರ ಪರಿಣಾಮ ಭಾರತೀಯ ರೂಪಾಯಿ ಮೇಲೆ ಉಂಟಾಗಿದೆ. ಸೋಮವಾರದ ವಹಿವಾಟಿನಲ್ಲಿ ಅಮೆರಿಕದ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು 41 ಪೈಸೆ ಕುಸಿತ ಕಂಡು, ಸಾರ್ವಕಾಲಿಕ ಕನಿಷ್ಠ ಮಟ್ಟವಾದ 93.94 ಕ್ಕೆ ತಲುಪಿದೆ.
ಮಾರ್ಚ್ ತಿಂಗಳ ಆರಂಭದಿಂದಲೇ ರೂಪಾಯಿ ಮೌಲ್ಯ ಸತತವಾಗಿ ಇಳಿಕೆಯಾಗುತ್ತಿದ್ದು, ಇಂದಿನ ಕುಸಿತವು ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ.
ಭಾರತವು ತನ್ನ ಅಗತ್ಯದ ಶೇ. 80ಕ್ಕೂ ಹೆಚ್ಚು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟಿನಿಂದಾಗಿ ತೈಲ ಬೆಲೆ ಪ್ರತಿ ಬ್ಯಾರೆಲ್ಗೆ 114 ಡಾಲರ್ ದಾಟಿದೆ. ಇದರಿಂದಾಗಿ ಡಾಲರ್ ಖರೀದಿಗೆ ಬೇಡಿಕೆ ಹೆಚ್ಚಾಗಿದ್ದು, ರೂಪಾಯಿ ಮೌಲ್ಯ ಕುಸಿಯುತ್ತಿದೆ.
ಯುದ್ಧದ ಅನಿಶ್ಚಿತತೆಯಿಂದಾಗಿ ವಿದೇಶಿ ಹೂಡಿಕೆದಾರರು (FIIs) ಭಾರತೀಯ ಷೇರು ಮಾರುಕಟ್ಟೆಯಿಂದ ಸುಮಾರು 1 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಹಿಂಪಡೆದಿದ್ದಾರೆ. ಇದು ರೂಪಾಯಿ ಮೇಲೆ ಭಾರೀ ಒತ್ತಡ ಹೇರಿದೆ. ರೂಪಾಯಿ ಮೌಲ್ಯ ಕುಸಿಯುವುದರಿಂದ ಆಮದು ಮಾಡಿಕೊಳ್ಳುವ ಪ್ರತಿಯೊಂದು ವಸ್ತುವೂ ದುಬಾರಿಯಾಗಲಿದೆ. ಮುಖ್ಯವಾಗಿ ಪೆಟ್ರೋಲ್, ಡೀಸೆಲ್, ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಅಡುಗೆ ಎಣ್ಣೆಯ ಬೆಲೆಗಳು ಏರಿಕೆಯಾಗುವ ಸಾಧ್ಯತೆಯಿದೆ.
ರೂಪಾಯಿಯ ಈ ಭೀಕರ ಕುಸಿತವನ್ನು ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ವಿದೇಶಿ ವಿನಿಮಯ ಮೀಸಲು ನಿಧಿಯಿಂದ ಸುಮಾರು 15 ಬಿಲಿಯನ್ ಡಾಲರ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ ಎಂದು ವರದಿಯಾಗಿದೆ.








