ಕೋಲ್ಕತ್ತಾ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಸೋನಾರ್ಪುರದಲ್ಲಿ ಶನಿವಾರ ನಡೆದ ಘಟನೆಯಲ್ಲಿ, ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಮೇಲೆ ದಾಳಿ ನಡೆದಿದೆ ಎಂದು ಆರೋಪಿಸಲಾಗಿದೆ. ಚುನಾವಣೆ ನಂತರದ ಹಿಂಸಾಚಾರದಿಂದ ಸಂತ್ರಸ್ತರಾದ ಕುಟುಂಬಗಳನ್ನು ಭೇಟಿ ಮಾಡಲು ತೆರಳಿದ್ದ ವೇಳೆ ಈ ಘಟನೆ ನಡೆದಿದ್ದು, ವಿರೋಧ ಪಕ್ಷದ ನಾಯಕರು ಇದನ್ನು ತೀವ್ರವಾಗಿ ಖಂಡಿಸಿದ್ದಾರೆ.
ಟಿಎಂಸಿ ನೀಡಿರುವ ಆರೋಪದ ಪ್ರಕಾರ, ಭದ್ರತಾ ಸಿಬ್ಬಂದಿ ಅವರನ್ನು ರಕ್ಷಿಸಲು ಪ್ರಯತ್ನಿಸಿದರೂ, ಜನರ ಗುಂಪೊಂದು ಅಭಿಷೇಕ್ ಬ್ಯಾನರ್ಜಿ ಅವರ ಮೇಲೆ ನೂಕಾಟ ನಡೆಸಿ ಹಲ್ಲೆ ನಡೆಸಿದೆ. ಗುಂಪಿನಲ್ಲಿದ್ದ ಮಹಿಳೆಯರು ಮೊಟ್ಟೆ ಮತ್ತು ಚಪ್ಪಲಿಗಳನ್ನು ಎಸೆದು, ಬೆದರಿಕೆ ಹಾಕಿದ್ದಾರೆ ಎಂದು ವರದಿಯಾಗಿದೆ. ದಾಳಿಯ ವೇಳೆ ಬ್ಯಾನರ್ಜಿ ಅವರು ಹೆಲ್ಮೆಟ್ ಧರಿಸಿದ್ದರು ಮತ್ತು ಅವರ ಅಂಗಿ ಹರಿದಿತ್ತು. ಅವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಗುಂಪಿನಿಂದ “ಚೋರ್ ಚೋರ್” (ಕಳ್ಳ, ಕಳ್ಳ) ಎಂದು ಕೂಗುವ ಸದ್ದು ಕೇಳಿಬಂತು.
ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮೇಲಿನ ದಾಳಿಯನ್ನು ಖಂಡಿಸಿದ್ದು, ಈ ಘಟನೆಗೆ ಬಿಜೆಪಿಯನ್ನು ದೂಷಿಸಿದ್ದಾರೆ. ‘ಎಕ್ಸ್’ (X) ನಲ್ಲಿ ಪೋಸ್ಟ್ ಮಾಡಿರುವ ಅವರು, “ಆಡಳಿತಗಾರರೇ ಹಂತಕರಾಗಿದ್ದಾರೆ – ಬಿಜೆಪಿ ನಿಮಗೆ ನಾಚಿಕೆಯಾಗಲಿ,” ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಈ ಘಟನೆಯನ್ನು ಖಂಡಿಸಿದ್ದು, ಸೂಕ್ತ ಭದ್ರತೆಯ ಕೊರತೆಯು ವಿರೋಧ ಪಕ್ಷದ ಧ್ವನಿಗಳನ್ನು ಗುರಿಯಾಗಿಸುವ ಬಿಜೆಪಿಯ ಧೋರಣೆಯನ್ನು ಪ್ರತಿಬಿಂಬಿಸುತ್ತದೆ ಎಂದು ಆರೋಪಿಸಿದ್ದಾರೆ. “ರಾಜ್ಯದಲ್ಲಿ ಚುನಾವಣೆ ನಂತರದ ಹಿಂಸಾಚಾರದಿಂದ ಸಂತ್ರಸ್ತರಾದ ಕುಟುಂಬಗಳನ್ನು ಭೇಟಿ ಮಾಡಲು ಹೋದ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಮೇಲೆ ನಡೆದ ಆಘಾತಕಾರಿ ದಾಳಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ,” ಎಂದು ಖರ್ಗೆ ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ.








