ನವದೆಹಲಿ: ಭಾರತದ ಇತಿಹಾಸದಲ್ಲೇ ಅತಿದೊಡ್ಡ ಬ್ಯಾಂಕ್ ವಂಚನೆ ಪ್ರಕರಣಗಳಲ್ಲಿ ಒಂದಾದ 2,672 ಕೋಟಿ ರೂಪಾಯಿಗಳ ಹಗರಣದ ಮುಖ್ಯ ಆರೋಪಿಗಳಲ್ಲಿ ಒಬ್ಬನಾದ ಕಮಲೇಶ್ ಪರೇಖ್‌ನನ್ನು ಕೇಂದ್ರೀಯ ತನಿಖಾ ದಳ (CBI) ಯಶಸ್ವಿಯಾಗಿ ಬಂಧಿಸಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ (UAE) ನಿಂದ ಆತನನ್ನು ಭಾರತಕ್ಕೆ ಹಸ್ತಾಂತರಿಸಲಾಗಿದ್ದು, ಶನಿವಾರ ದೆಹಲಿ ವಿಮಾನ ನಿಲ್ದಾಣದಲ್ಲಿ ಸಿಬಿಐ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದಾರೆ.
ಕೊಲ್ಕತ್ತಾ ಮೂಲದ ‘ಶ್ರೀ ಗಣೇಶ್ ಜ್ಯುವೆಲ್ಲರಿ ಹೌಸ್’ (Shree Ganesh Jewellery House) ಸಂಸ್ಥೆಯ ಪ್ರವರ್ತಕನಾಗಿದ್ದ ಕಮಲೇಶ್ ಪರೇಖ್, ಎಸ್‌ಬಿಐ ನೇತೃತ್ವದ 25 ಬ್ಯಾಂಕ್‌ಗಳ ಒಕ್ಕೂಟಕ್ಕೆ ಬರೋಬ್ಬರಿ 2,672 ಕೋಟಿ ರೂಪಾಯಿ ವಂಚಿಸಿದ ಆರೋಪ ಹೊತ್ತಿದ್ದಾನೆ. 2016ರಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಅಂದಿನಿಂದಲೂ ಈತ ದೇಶ ಬಿಟ್ಟು ತಲೆಮರೆಸಿಕೊಂಡಿದ್ದನು.
ಸಿಬಿಐ ವಿನಂತಿಯ ಮೇರೆಗೆ ಈತನ ವಿರುದ್ಧ ಇಂಟರ್‌ಪೋಲ್ ಮೂಲಕ ‘ರೆಡ್ ಕಾರ್ನರ್’ ನೋಟಿಸ್ ಜಾರಿ ಮಾಡಲಾಗಿತ್ತು.ಅಂತಾರಾಷ್ಟ್ರೀಯ ಪೋಲಿಸ್ ಸಹಕಾರದೊಂದಿಗೆ ಯುಎಇ ಅಧಿಕಾರಿಗಳು ಆತನನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದರು. ಕಾನೂನು ಪ್ರಕ್ರಿಯೆಗಳ ನಂತರ ಮೇ 1 ರಂದು ಆತನನ್ನು ಭಾರತಕ್ಕೆ ಹಸ್ತಾಂತರಿಸಲಾಯಿತು.








