ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ 15,841.48 ಕೋಟಿ ರೂಪಾಯಿ ಸಾಲ ನೀಡುವ ಮೂಲಕ ಬರಗಾಲದಿಂದ ಸಂಕಷ್ಟದಲ್ಲಿದ್ದ ರೈತ ಸಮುದಾಯಕ್ಕೆ ಸರಕಾರ ಆಸರೆಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ 21 ಡಿಸಿಸಿ ಬ್ಯಾಂಕ್ ಹಾಗೂ 6,040 ಕೃಷಿ ಪತ್ತಿನ ಸಹಕಾರ ಸಂಘಗಳಿಂದ ₹24,600 ಕೋಟಿ ಬೆಳೆ ಸಾಲ ನೀಡುವ ಗುರಿ ಹೊಂದಲಾಗಿತ್ತು. ಅದರಲ್ಲಿ ಜನವರಿವರೆಗೆ 19.97 ಲಕ್ಷ ರೈತರಿಗೆ ₹15,841.48 ಕೋಟಿ ಸಾಲ ನೀಡಲಾಗಿದೆ. ಕಳೆದ ಅವಧಿಗಿಂತ ಹೆಚ್ಚುವರಿಯಾಗಿ ₹776.48 ಕೋಟಿ ಸಾಲ
ನೀಡಲಾಗಿದೆ. ಪ್ರಸಕ್ತ ಸಾಲಿನ ಉಳಿದ ಗುರಿಯನ್ನು ಶೀಘ್ರದಲ್ಲಿ ಮುಟ್ಟಲಾಗುವುದು. ಅದಕ್ಕೆ ಬೇಕಾದ ಎಲ್ಲ ಕ್ರಮವನ್ನೂ ಸರ್ಕಾರ ಕೈಗೊಳ್ಳುತ್ತಿದೆ ಎಂದಿದ್ದಾರೆ.
ಶೂನ್ಯ ಬಡ್ಡಿ ದರದಲ್ಲಿ ಈವರೆಗೆ 19,97,607 ರೈತರಿಗೆ 15,841.48 ಕೋಟಿ ರೂ. ಕೃಷಿ ಸಾಲ ವಿತರಣೆಯಾಗಿದೆ. ಪ್ರಸಕ್ತ ಆರ್ಥಿಕ ಸಾಲಿನ ಅಂತ್ಯದೊಳಗೆ 24,600 ಕೋಟಿ ರೂ. ಬೆಳೆ ಸಾಲ ನೀಡುವ ಗುರಿ ಹೊಂದಲಾಗಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಬೆಲೆ ಏರಿಕೆಯ ಈ ಸಂದರ್ಭದಲ್ಲಿ ಜನಸಾಮಾನ್ಯರ ನೆರವಿಗೆ ಸರಕಾರ ಧಾವಿಸಿದೆ.
ಸದ್ಯ ನೀಡಲಾಗಿರುವ ಸಾಲದ ಪೈಕಿ ಅಲ್ಪಾವಧಿ ಕೃಷಿ ಸಾಲದ ಅಡಿಯಲ್ಲಿ 19.63 ಲಕ್ಷ ರೈತರಿಗೆ ₹15,031.72 ಕೋಟಿ ಸಾಲ ನೀಡಲಾಗಿದೆ. ಮಧ್ಯಮಾವಧಿಯಲ್ಲಿ 15,771 ರೈತರಿಗೆ ₹536.35 ಕೋಟಿ, ಧೀರ್ಘಾವಧಿಯಲ್ಲಿ 17,873 ರೈತರಿಗೆ ಕ273.41 ಕೋಟಿ ಸಾಲ ನೀಡಲಾಗಿದೆ ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಸದ್ಯ ಭೀಕರ ಬರಗಾಲವಿದೆ. 48 ಸಾವಿರ ಹೆಕ್ಟೇರ್ ಕೃಷಿ ಪ್ರದೇಶವು ಬರಗಾಲಕ್ಕೆ ತುತ್ತಾಗಿವೆ.
ಎಲ್ಲ ರೈತರಿಗೂ ಬರ ಪರಿಹಾರ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಹಕಾರ ಸಚಿವ ಕೆ.ಎನ್.ರಾಜಣ್ಣ ಉತ್ತಮ ಕಾರ್ಯ ಮಾಡಿದ್ದು, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.