ಚಿಕ್ಕಬಳ್ಳಾಪುರ: ಜಿಲ್ಲೆಯ ನೂತನ ವಿಧಾನಸಭಾ ಕ್ಷೇತ್ರವಾದ ಮಂಚೇನಹಳ್ಳಿ ಕೇಂದ್ರಕ್ಕೆ 10 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಘೋಷಣೆ ಮಾಡಿದ್ದಾರೆ.
ಜಿಲ್ಲೆಯ ಜರಬಂಡಹಳ್ಳಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಬಳಿಕ ಸಚಿವ ಆರ್. ಅಶೋಕ್ ಮಾತನಾಡಿ, 79 ಎ.ಬಿ ನಿಯಮ ತೆಗೆದು ಹಾಕಿದ್ದೇನೆ. ಅಧಿಕಾರಿಗಳು 79 ಎ, ಬಿ ಇಟ್ಟುಕೊಂಡು ಕಿರುಕುಳ ಕೊಡುತ್ತಿದ್ದರು. 94ಸಿ ಅಡಿಯಲ್ಲಿ ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡವರಿಗೆ ನೊಂದಣಿ ಮಾಡಲಾಗಿದೆ. ಸದ್ಯ 10 ಸಾವಿರ ಜನರಿಗೆ 94ಸಿಯಿಂದ ಅನುಕೂಲವಾಗಿದ್ದು, ರೈತರ ಜಮೀನು ದಾಖಲೆಗಳು ಮನೆ ಬಾಗಿಲಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದಿದ್ದಕ್ಕೆ ನನ್ನನ್ನು ಸೋಲಿಸಿ ಬಿಟ್ಟರು. ನನಗೆ ಏನು ಬೇಕಾಗಿಲ್ಲ. ನನಗೆ ಬಡವರ ಸೇವೆ ಮಾತ್ರ ಬೇಕು. ದೇವರು ನನಗೆ ಎಲ್ಲವನ್ನು ಕೊಟ್ಟಿದ್ದಾನೆ ಎಂದು ತಮ್ಮ ಸೋಲಿನ ಕಹಿ ಘಟನೆಯನ್ನು ಸಚಿವ ಎಂ.ಟಿ.ಬಿ ನಾಗರಾಜ್ ನೆನಪು ಮಾಡಿಕೊಂಡರು. ನಾನು ಸೋತ ಕಾರಣ ಕ್ಷೇತ್ರದ ಅಭಿವೃದ್ದಿಗೆ ಹಿನ್ನೆಡೆ ಆಯಿತು. ಜನ ಚುನಾವಣೆಯಲ್ಲಿ ಒಳ್ಳೆ ಕೆಲಸ ಮರೆಯುತ್ತಾರೆ. ಜನ ನಿದ್ದೆ ಮಂಪರಿನಲ್ಲಿ ಇದ್ದಂತೆ ಮತ ಹಾಕುತ್ತಾರೆ ಎಂದು ಜರಬಂಡಹಳ್ಳಿ ಗ್ರಾಮದಲ್ಲಿ ನಡೆದ ಗ್ರಾಮ ವಾಸ್ತವ್ಯದಲ್ಲಿ ಎಂ.ಟಿ.ಬಿ ನಾಗರಾಜ್ ನೋವು ತೋಡಿಕೊಂಡರು.