ನವದೆಹಲಿ: ಗಣರಾಜ್ಯೋತ್ಸವ ಪರೇಡ್ 2025ರಲ್ಲಿ ಇದೇ ಮೊದಲ ಬಾರಿಗೆ ಮೂರು ಸರ್ಕಾರಿ ಶಾಲಾ ಬ್ಯಾಂಡ್ ತಂಡಗಳು ಪ್ರದರ್ಶನ ನೀಡಲಿವೆ. ಗಣರಾಜ್ಯೋತ್ಸವ ಪರೇಡ್ ಮತ್ತು ವಿಜಯ್ ಚೌಕ್ ನಲ್ಲಿ ಜಾರ್ಖಂಡ್, ಸಿಕ್ಕಿಂ ಹಾಗು ಕರ್ನಾಟಕದ ಶಾಲಾ ಬ್ಯಾಂಡ್ ಗಳು ಪ್ರದರ್ಶನ ನೀಡಲಿವೆ. ರಾಷ್ಟ್ರಪತಿಗಳ ವೇದಿಕೆಯ ಎದುರಿನ ವೇದಿಕೆಯಲ್ಲಿ (ರೋಸ್ಟ್ರಮ್) ಗ್ರಾಮೀಣ ಅವಕಾಶವಂಚಿತ ಹಿನ್ನೆಲೆಯ ಜಾರ್ಖಂಡದ ಹುಡುಗಿಯರು ಪ್ರದರ್ಶನ ನೀಡಲಿದ್ದಾರೆ.
2025ರ ಜನವರಿ 26 ರಂದು ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಪರೇಡಿನಲ್ಲಿ ಪ್ರದರ್ಶನ ನೀಡಲು ಮೂರು ಸರ್ಕಾರಿ ಶಾಲಾ ತಂಡಗಳು ಸಜ್ಜಾಗಿವೆ. ಜಾರ್ಖಂಡ್ ನ ಪ್ರಧಾನಮಂತ್ರಿ ಕೆ.ಜಿ.ಬಿ.ವಿ.ಪಟಮ್ಡಾ ತಂಡವು ಸೇನಾ ಬ್ಯಾಂಡ್ ನೊಂದಿಗೆ ಸಮನ್ವಯಗೊಂಡು ರಾಷ್ಟ್ರಪತಿಗಳ ವೇದಿಕೆಯ ಎದುರಿನ ವೇದಿಕೆಯಲ್ಲಿ (ರಾಸ್ಟ್ರಮ್ ನಲ್ಲಿ) ಪ್ರದರ್ಶನ ನೀಡುವ ಗೌರವವನ್ನು ಪಡೆಯಲಿದೆ. ಏತನ್ಮಧ್ಯೆ, ಸಿಕ್ಕಿಂನ ಗ್ಯಾಂಗ್ಟಾಕಿನ ಸರ್ಕಾರಿ ಹಿರಿಯ ಸೆಕೆಂಡರಿ ಶಾಲೆ ವೆಸ್ಟ್ ಪಾಯಿಂಟ್ ಮತ್ತು ಕರ್ನಾಟಕದ ಬೆಳಗಾವಿ ಕಂಟೋನ್ಮೆಂಟ್ನ ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯ ಸಂಖ್ಯೆ 2 ರ ತಂಡಗಳು ವಿಜಯ್ ಚೌಕ್ನಲ್ಲಿ ತಮ್ಮ ಪ್ರದರ್ಶನವನ್ನು ನೀಡಲಿವೆ. ಹೊಸದಿಲ್ಲಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ 2025 ರ ಜನವರಿ 24-25 ರಂದು ನಡೆಯುವ ರಾಷ್ಟ್ರೀಯ ಶಾಲಾ ಬ್ಯಾಂಡ್ ಸ್ಪರ್ಧೆ 6.0 ರ ಗ್ರ್ಯಾಂಡ್ ಫಿನಾಲೆಯಲ್ಲಿ ಸ್ಪರ್ಧಿಸುತ್ತಿರುವ 16 ತಂಡಗಳಲ್ಲಿ ಈ ಶಾಲಾ ಬ್ಯಾಂಡ್ ಗಳು ಸೇರಿವೆ.
ಜಾರ್ಖಂಡಿನ ಪೂರ್ವ ಸಿಂಗ್ಭೂಮ್ ನ ಪಟಾಮ್ಡಾದ ಪಿಎಂ ಶ್ರೀ ಕಸ್ತೂರ್ಬಾ ಗಾಂಧಿ ಬಾಲಿಕಾ ವಿದ್ಯಾಲಯದ (ಕೆಜಿಬಿವಿ) ಪೈಪ್ ಬ್ಯಾಂಡ್ ಬಾಲಕಿಯರ ತಂಡವು ದೃಢನಿಶ್ಚಯ ಮತ್ತು ಸಾಧನೆಯ ಸ್ಪೂರ್ತಿದಾಯಕ ಪ್ರಯಾಣವನ್ನು ಪ್ರದರ್ಶಿಸುತ್ತದೆ. ಈ 25 ಸದಸ್ಯರ ತಂಡವು ಕೃಷಿ ಮತ್ತು ದಿನಗೂಲಿ ಕಾರ್ಮಿಕರನ್ನು ಅವಲಂಬಿಸಿರುವ ದೀನದಲಿತ ಕುಟುಂಬಗಳ ಹುಡುಗಿಯರನ್ನು ಒಳಗೊಂಡಿದೆ. ಹೆಚ್ಚಿನವರಿಗೆ, ಇದು ದಿಲ್ಲಿಗೆ ಅವರ ಮೊದಲ ರೈಲು ಪ್ರಯಾಣವಾಗಿದೆ. ಅವರು ರಾಮಗಢ ಸೇನಾ ರೆಜಿಮೆಂಟಲ್ ಕೇಂದ್ರದಲ್ಲಿರುವ ಸಿಖ್ ರೆಜಿಮೆಂಟ್ ಮತ್ತು ಪಂಜಾಬ್ ರೆಜಿಮೆಂಟಿನ ಬೋಧಕರಿಂದ ಮಾರ್ಗದರ್ಶನ ಪಡೆದಿದ್ದಾರೆ.
ಹಿತ್ತಾಳೆ (ಬ್ರಾಸ್) ಬ್ಯಾಂಡ್ ಬಾಲಕಿಯರ ತಂಡ
ಸಿಕ್ಕಿಂನ ಗ್ಯಾಂಗ್ಟಾಕಿನ ಸರ್ಕಾರಿ ವೆಸ್ಟ್ ಪಾಯಿಂಟ್ ಸೀನಿಯರ್ ಸೆಕೆಂಡರಿ ಶಾಲೆಯು ರಾಜ್ಯ, ವಲಯ ಮತ್ತು ರಾಷ್ಟ್ರ ಮಟ್ಟದ ಪ್ರಶಂಸೆಗಳನ್ನು ಪಡೆಯುವ ಮೂಲಕ ಶ್ರೇಷ್ಠತೆಯ ಮಾನದಂಡಗಳನ್ನು ನಿಗದಿಪಡಿಸಿದೆ. ಏಳು ಚಾಂಪಿಯನ್ ತಂಡಗಳ ವಿರುದ್ಧ ಸ್ಪರ್ಧಿಸಿದ ತಂಡವು ಸಾಟಿಯಿಲ್ಲದ ಸಮರ್ಪಣೆಯನ್ನು ಪ್ರದರ್ಶಿಸಿತು ಮತ್ತು ಪೂರ್ವ ವಲಯದ ಚಾಂಪಿಯನ್ ಆಗಿ ಹೊರಹೊಮ್ಮಿತು. ಈ ವಿದ್ಯಾರ್ಥಿಗಳಲ್ಲಿ ಅನೇಕರು ವಿನಮ್ರ ಮತ್ತು ಸವಾಲಿನ ಹಿನ್ನೆಲೆಯಿಂದ ಬಂದವರು.
ಕರ್ನಾಟಕದ ಬೆಳಗಾವಿ ಕಂಟೋನ್ಮೆಂಟ್ನ ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯ ಸಂಖ್ಯೆ 2 ರ ಪೈಪ್ ಬ್ಯಾಂಡ್ (ಬಾಲಕರ) ತುಕಡಿಯಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪೋಷಕರನ್ನು ಹೊಂದಿರುವ ಕುಟುಂಬಗಳ ಅನೇಕ ವಿದ್ಯಾರ್ಥಿಗಳು ಇದ್ದಾರೆ. ಈ ತಂಡಕ್ಕೆ ಎಂಎಲ್ಐಆರ್ಸಿ (ಮರಾಠಾ ಲೈಟ್ ಇನ್ಫೆಂಟ್ರಿ ರೆಜಿಮೆಂಟಲ್ ಸೆಂಟರ್ ಬೆಳಗಾವಿ) ತರಬೇತಿ ನೀಡಿದೆ.
“ಸಂಪೂರ್ಣ ಸರ್ಕಾರದ ವಿಧಾನ”ಕ್ಕೆ ಅನುಗುಣವಾಗಿ, ಸೇನಾ ರೆಜಿಮೆಂಟಲ್ ಕೇಂದ್ರಗಳ ಬ್ಯಾಂಡ್ ಬೋಧಕರು / ತಂಡಗಳಿಂದ ಪಿಎಂ ಶ್ರೀ ಶಾಲಾ ಬ್ಯಾಂಡ್ ತಂಡಗಳಿಗೆ ತರಬೇತಿ ನೀಡಲು ಉಪಕ್ರಮವನ್ನು ತೆಗೆದುಕೊಳ್ಳಲಾಗಿದೆ. ತರಬೇತಿಯು 11 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಾರಂಭವಾಗಿದೆ ಮತ್ತು ಉಳಿದ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ತರುವಾಯ, ಹೆಚ್ಚಿನ ಶಾಲೆಗಳು ಬ್ಯಾಂಡ್ ವ್ಯವಸ್ಥೆಗೆ ಸೇರ್ಪಡೆಯಾಗಲಿವೆ, ಸೈನ್ಯದ ಪ್ರಾದೇಶಿಕ ಕೇಂದ್ರಗಳ ಬೆಂಬಲದೊಂದಿಗೆ, ಮಕ್ಕಳಿಗೆ ಹೊಸ ಅವಕಾಶಗಳನ್ನು ಅವು ತೆರೆಯುತ್ತವೆ. ಪಿಎಂ ಶಾಲೆಗಳ ವಿದ್ಯಾರ್ಥಿಗಳಿಗೆ ಸಮಗ್ರ ಶಿಕ್ಷಣವನ್ನು ನೀಡುವ ಮತ್ತು ಅವರನ್ನು ಉತ್ತಮ ವ್ಯಕ್ತಿತ್ವಗಳಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಇದು ಒಂದು ಹೆಜ್ಜೆಯಾಗಿದೆ.
ಕೇಂದ್ರ ಪ್ರಾಯೋಜಿತ ಯೋಜನೆಯಾದ ಸಮಗ್ರ ಶಿಕ್ಷಾದ ನಾವೀನ್ಯತೆ ಘಟಕದ ಅಡಿಯಲ್ಲಿ ರಾಜ್ಯ ಮಟ್ಟದಲ್ಲಿ ಬ್ಯಾಂಡ್ ಸ್ಪರ್ಧೆಯನ್ನು ಆಯೋಜಿಸಲು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಆರ್ಥಿಕ ಬೆಂಬಲವನ್ನು ಒದಗಿಸಲಾಗುತ್ತಿದೆ.
ರಾಷ್ಟ್ರೀಯ ಶಿಕ್ಷಣ ನೀತಿ 2020, 21 ನೇ ಶತಮಾನದ ಮೊದಲ ಶಿಕ್ಷಣ ನೀತಿಯಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದ ಪರಿವರ್ತನೆಯ ಸುಧಾರಣೆಗಳನ್ನು ಗುರಿಯಾಗಿಸಿಕೊಂಡಿದೆ. ಆ ದಿಕ್ಕಿನಲ್ಲಿ, ಈ ಕಾರ್ಯಕ್ರಮವು ದೇಶಭಕ್ತಿ ಮತ್ತು ರಾಷ್ಟ್ರೀಯ ಹೆಮ್ಮೆಯ ಪ್ರಜ್ಞೆಯನ್ನು ಮೂಡಿಸುವುದಲ್ಲದೆ, ವಿದ್ಯಾರ್ಥಿಗಳ ಸಂಗೀತ ಕೌಶಲ್ಯಗಳನ್ನು ಹೆಚ್ಚಿಸುತ್ತದೆ ಮತ್ತು ಅವರಲ್ಲಿ ಶಿಸ್ತನ್ನು ಬೆಳೆಸುತ್ತದೆ. ಈ ಉಪಕ್ರಮವು ದೇಶಾದ್ಯಂತ ಶಾಲಾ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಮತ್ತು ಏಕತೆಯ ಮನೋಭಾವವನ್ನು ಪುನರುಜ್ಜೀವನಗೊಳಿಸುವ ಗುರಿಯನ್ನು ಹೊಂದಿದೆ ಮತ್ತು ಸಮಗ್ರ ಶಿಕ್ಷಣದ ಪ್ರಗತಿಗೆ ಸಹಾಯ ಮಾಡುತ್ತದೆ.
ಹೀಗಿದೆ 2025ರ ಗಣರಾಜ್ಯೋತ್ಸವದ ಮುನ್ನಾದಿನದಂದು ರಾಷ್ಟ್ರವನ್ನುದ್ದೇಶಿಸಿ ರಾಷ್ಟ್ರಪತಿ ಮುರ್ಮು ಭಾಷಣ ಹೈಲೈಟ್ಸ್