ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಮಾಡಿದ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್ ಅಂಡ್ ಗ್ಯಾಂಗ್‌ನ 17 ಸದಸ್ಯರ ಪೈಕಿ ನಾಲ್ವರನ್ನು ತುಮಕೂರು ಜಿಲ್ಲಾ ಕಾರಾಗೃಹಕ್ಕೆ ವರ್ಗಾಯಿಸಲು ಕೋರ್ಟ್ ಅನುಮತಿ ನೀಡಿದೆ ಎಂದು ತಿಳಿದುಬಂದಿದೆ.ನಾಲ್ವರು ಆರೋಪಿಗಳನ್ನು ಸ್ಥಳಾಂತರಿಸಲು 24ನೇ ACMM ನ್ಯಾಯಾಲಯ ಆದೇಶ ಹೊರಡಿಸಿದೆ. ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಿಂದ ತುಮಕೂರು ಜೈಲಿಗೆ ಸ್ಥಳಾಂತರಿಸಲು ಕೋರ್ಟ್ ಆದೇಶಿಸಿದೆ.
ನಟಿ ಪವಿತ್ರಾಗೌಡಗೆ ಅಶ್ಲೀಲ ಕಾಮೆಂಟ್ ಮಾಡಿದ್ದಾನೆಂದು ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ನಟ ದರ್ಶನ್ ಅಂಡ್ ಗ್ಯಾಂಗ್‌ನಿಂದ ಕಿಡ್ನಾಪ್ ಮಾಡಿ ಭೀಕರವಾಗಿ ಕೊಲೆ ಮಾಡಿತ್ತು.ಕೊಲೆ ಘಟನೆ ಬೆನ್ನಲ್ಲಿಯೇ ನಟ ದರ್ಶನ್‌ನಿಂದ 30 ಲಕ್ಷ ರೂ. ಹಣವನ್ನು ಪಡೆದು ತಾವೇ ಕೊಲೆ ಮಾಡಿದ್ದೆಂದು ನಾಲ್ವರು ಆರೋಪಿಗಳು ಸರೆಂಡರ್ ಆಗಿದ್ದರು.
ರೇಣುಕಾಸ್ವಾಮಿ ಕೊಲೆ ಕೇಸಿನ ಆರೋಪಿಗಳಾದ A8- ರವಿ, A15-ಕಾರ್ತಿಕ್, A16- ಕೇಶವ ಮೂರ್ತಿ A17-ನಿಖಿಲ್ ನಾಯಕ್ ಅವರನ್ನು ತುಮಕೂರು ಜೈಲಿಗೆ ಶಿಫ್ಟ್ ಮಾಡಲಾಗುತ್ತಿದೆ. ಕೊಲೆ ಕೇಸಿನಲ್ಲಿ ಮೊದಲು ಕಾರ್ತೀಕ್, ಕೇಶವ್ ಹಾಗೂ ನಿಖಿಲ್ ಮೊದಲು ಪೊಲೀಸರ ಮುಂದೆ ಶರಣಾಗಿದ್ದರು. ಈ ಮೂವರು ಕೊಲೆ ಬಗ್ಗೆ ಸಂಪೂರ್ಣವಾಗಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದರು.
ಇವರು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದರಿಂದ ನಟ ದರ್ಶನ್, ನಟಿ ಪವಿತ್ರಾಗೌಡ, ನಟ ಪ್ರದೂಷ್ ಸೇರಿ ಒಟ್ಟು 14 ಜನರು ಅರೆಸ್ಟ್ ಆಗಿದ್ದರು. ಈಗ ಕಾನೂನು ಸುವ್ಯವಸ್ಥೆ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರದಿಂದ ಬೇರೆ ಜೈಲಿಗೆ ಶಿಫ್ಟ್ ಮಾಡಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡು ದರ್ಶನ್ ಸೇರಿ ಉಳಿದವರ ಹೆಸರನ್ನು ಹೇಳಿದ್ದ ಆರೋಪಿಗಳಾದ ಕಾರ್ತೀಕ್, ಕೇಶವ್ ಹಾಗೂ ನಿಖಿಲ್ ಸೇರಿದಂತೆ ಮತ್ತೊಬ್ಬ ಆರೋಪಿಯನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬೇರೆಡೆ ಸ್ಥಳಾಂತರ ಮಾಡುವಂತೆ ಎಸ್ ಪಿ ಪಿ ಪ್ರಸನ್ನ ಕುಮಾರ್ ಮನವಿ ಮಾಡಿದ್ದರು. ಇದನ್ನು ಪುರಸ್ಕರಿಸಿದ ನ್ಯಾಯಾಲಯವು ನಾಲ್ವರು ಆರೋಪಿಗಳನ್ನು ತುಮಕೂರು ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಲು ಅನುಮತಿ ನೀಡಿದೆ.