ಚನ್ನಪಟ್ಟಣ : “ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಹೆಸರು ಬದಲಾಯಿಸಿದ ಕಾರಣಕ್ಕೆ ಯುವ ಪೀಳಿಗೆಗೆ ಉದ್ಯೋಗ ಹಾಗು ಜೀವನ ಕಟ್ಟಿಕೊಳ್ಳಲು ಹೆಚ್ಚು ಅವಕಾಶಗಳು ಸೃಷ್ಟಿಯಾಗುತ್ತಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅಭಿಪ್ರಾಯ ಪಟ್ಟರು.
ಚನ್ನಪಟ್ಟಣದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು ಆವರಣದಲ್ಲಿ ನಡೆದ ಬೃಹತ್ ಉದ್ಯೋಗ ಮೇಳದಲ್ಲಿ ಮಾತನಾಡಿದ ಅವರು “ಬೆಂಗಳೂರಿನ ಹೆಸರು ಈ ಜಿಲ್ಲೆಗೆ ಏಕೆ ಬೇಕು ಎಂದು ಒಂದಷ್ಟು ಜನ ಪ್ರಶ್ನೆ ಮಾಡುತ್ತಿದ್ದರು. ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿ ಆಗುವುದು ಬೇಕಿಲ್ಲವೆ. ಉದ್ಯೋಗ ಸೃಷ್ಟಿ ಮಾಡುವುದೇ ಕಾಂಗ್ರೆಸ್ ಸರ್ಕಾರದ ಗುರಿ” ಎಂದು ಹೇಳಿದರು.
“ನಾವು ಉದ್ಯೋಗ ಮೇಳಕ್ಕೆ ಬಂದಿರುವ ಎಲ್ಲರಿಗೂ ಕೆಲಸ ಕೊಡಿಸುತ್ತೇವೆ ಎಂದು ಹೇಳುವುದಿಲ್ಲ. ಆದರೆ ಯಾವ ಮಾರ್ಗದಲ್ಲಿ ನಡೆದರೆ ಯಶಸ್ಸು ಸಿಗುತ್ತದೆ ಎಂದು ದಾರಿ ಮಾಡಿಕೊಡುತ್ತೇವೆ” ಎಂದು ಹೇಳಿದರು.
“ನಾನು ಅನೇಕ ಹೆಣ್ಣು ಮಕ್ಕಳನ್ನು ಮಾತನಾಡಿಸಿಕೊಂಡು ಬಂದೆ. ಅನೇಕರಲ್ಲಿ ದುಡಿಯಬೇಕು ಎನ್ನುವ ಹಸಿವು ಹೆಚ್ಚಿದೆ. ನನಗೆ ಅನೇಕರ ಪರಿಸ್ಥಿತಿ ನೋಡಿ ಸಂಕಟ ಉಂಟಾಯಿತು. ನಮ್ಮ ಊರಿನ ಪಕ್ಕದ ಲಂಬಾಣಿ ತಾಂಡದ ಹೆಣ್ಣು ಮಗಳು ಬಂದಿದ್ದು ನೋಡಿ ಸಂತೋಷವಾಯಿತು. ಬಯಾಲಜಿ ಓದಿರುವ ವಿದ್ಯಾರ್ಥಿನಿಯನ್ನು ಒಂದು ಕಂಪೆನಿಯವರು ಸಂದರ್ಶನ ಮಾಡುತ್ತಿದ್ದರು. ಕೊನೆಗೆ 20 ಸಾವಿರ ಸಂಬಳ ಕೊಡುತ್ತೇವೆ ಎಂದು ಹೇಳಿದರು. ಆಗ ಆ ಹೆಣ್ಣು ಮಗಳು ನನಗೆ ಉಳಿದುಕೊಳ್ಳುವ ವ್ಯವಸ್ಥೆ ಇಲ್ಲ ಅದನ್ನು ಮಾಡಿ ಎಂದಾಗ ನನಗೆ ಹೊಟ್ಟೆಯಲ್ಲಿ ಸಂಕಟವಾಯಿತು. ಈ ಸಮಸ್ಯೆಗಳ ನಿವಾರಣೆಗೆ ಸರ್ಕಾರ ಮುಂದಾಗಲಿದೆ” ಎಂದು ಭರವಸೆ ನೀಡಿದರು.
ಆಯಾಯ ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ
“ಬೆಂಗಳೂರಿನ ಮೇಲೆ ಒತ್ತಡ ಹೆಚ್ಚಾಗುತ್ತಿರುವ ಕಾರಣಕ್ಕೆ ಆಯಾಯ ಜಿಲ್ಲೆಗಳಲ್ಲೇ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುತ್ತಿದೆ. ಅನೇಕ ಮಂತ್ರಿಗಳು ಅವರ ಜಿಲ್ಲೆಗಳಲ್ಲಿ ಉದ್ಯೋಗ ಮೇಳ ಆಯೋಜಿಸಿ ಯುವಕರಿಗೆ ನೆರವಾಗಿದ್ದಾರೆ” ಎಂದು ಹೇಳಿದರು.
“ಬಿಡದಿಯ ಟೊಯೋಟಾ ಕಂಪನಿಯವರು ತಮ್ಮ ಸಿ ಎಸ್ ಆರ್ ಅನುದಾನದಲ್ಲಿ ಜಿಲ್ಲೆಯ ಸಾಕಷ್ಟು ಕಡೆ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಕಟ್ಟುತ್ತಿದ್ದಾರೆ. ಸರ್ಕಾರವು ಇದಕ್ಕೆ ಸಹಕಾರ ನೀಡುತ್ತಿದೆ. ಈ ರೀತಿಯಾಗಿ ಜಿಲ್ಲೆಯನ್ನು ಅಭಿವೃದ್ಧಿ ಮಾಡಲು ನಾವು ಪಣ ತೊಟ್ಟಿದ್ದೇವೆ” ಎಂದರು.
ಸಂಪುಟ ಸಹೋದ್ಯೋಗಿಯಾದ ಶರಣ ಪ್ರಕಾಶ್ ಪಾಟೀಲರು ಯುವಜನರ ಜೊತೆ ಒಡನಾಟ ಇಟ್ಟುಕೊಳ್ಳುವ ಖಾತೆಯೇ ಬೇಕು ಎಂದು ಪಡೆದು ಉತ್ತಮ ಕೆಲಸ ಮಾಡುತ್ತಿದ್ದಾರೆ. ಉದ್ಯೋಗ ಮೇಳದಲ್ಲಿ ನೂರು, ಸಾವಿರ ಅಥವಾ ಒಬ್ಬರಿಗೆ ಕೆಲಸ ಸಿಗಬಹುದು. ಆದರೆ ನಾವು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ, ಮಾಡುತ್ತಿದ್ದೇವೆ” ಎಂದು ಹೇಳಿದರು.
“ನಮ್ಮ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉತ್ತಮ ಅಭಿಪ್ರಾಯಗಳನ್ನು ಉದ್ಯೋಗ ಮೇಳದ ಬಗ್ಗೆ ವ್ಯಕ್ತಪಡಿಸಿದರು. ನಮ್ಮ ಮಕ್ಕಳು ಕಂಪನಿಗಳಿಗೆ ಅಲೆಯುವ ಬದಲು, ಮನೆ ಬಾಗಿಲಿಗೆ ಅವರೇ ಬಂದು ಕೆಲಸ ಕೊಡುತ್ತಿರುವುದು ಉತ್ತಮವಾಗಿದೆ” ಎಂದು ಹೇಳಿದರು.
ಕೆಲಸ ಕೊಡುವ ಮಟ್ಟಕ್ಕೆ ಬೆಳೆಯಿರಿ
“ಸುಮಾರು 6 ಸಾವಿರ ಉದ್ಯೋಗಾಕಾಂಕ್ಷಿಗಳು ಸೇರಿದ್ದಾರೆ. ನೀವು ಇಲ್ಲಿಗೆ ಅವಕಾಶ ಹುಡುಕಿಕೊಂಡು ಬಂದಿದ್ದೀರಿ. ಮುಂದೊಂದು ದಿನ ಅವಕಾಶಗಳೇ ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ಆ ಮಟ್ಟಕ್ಕೆ ನೀವು ಬೆಳೆಯಬೇಕು. ನೀವೇ ನಾಲ್ಕು ಜನಕ್ಕೆ ಉದ್ಯೋಗ ಕೊಡುವ ಮಟ್ಟಕ್ಕೆ ಬೆಳೆಯಬೇಕು. ಕೆಲಸ ಸಿಗಲಿಲ್ಲ ಅಂದರೆ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಒಂದಲ್ಲ ಒಂದು ದಿನ ಯಶಸ್ಸು ಖಂಡಿತ ದೊರೆಯುತ್ತದೆ” ಎಂದರು.
“ಸರ್ಕಾರ ಅನೇಕ ನಿಗಮಗಳ ಮೂಲಕ ಸ್ವಯಂ ಉದ್ಯೋಗಕ್ಕೆ ಉತ್ತೇಜನ ಕೊಡುತ್ತಿದೆ. ಸಾಲ ಸೌಲಭ್ಯದ ಅವಕಾಶವಿದೆ. ಇದರ ಸದುಪಯೋಗವನ್ನು ನೀವೆಲ್ಲ ಪಡೆದುಕೊಳ್ಳಬೇಕು” ಎಂದು ಹೇಳಿದರು.
“ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಪದವೀಧರರು ಇದ್ದಿದ್ದೆ ಚನ್ನಪಟ್ಟಣ ತಾಲೂಕಿನಲ್ಲಿ ಎನ್ನುವ ಹೆಸರಿತ್ತು. ಈ ರಾಜ್ಯದ ಮೊದಲ ಶಿಕ್ಷಣ ಮಂತ್ರಿ ವೆಂಕಟಗಿರಿ ಗೌಡರು ಇದೇ ತಾಲೂಕಿನವರು. ವಿದ್ಯಾವಂತರ, ಸುಶಿಕ್ಷಿತರ ನಾಡು ಚನ್ನಪಟ್ಟಣ” ಎಂದರು.
ಪಕ್ಷಭೇದ ಮರೆತು ಅವಕಾಶಗಳನ್ನು ಬಳಸಿಕೊಳ್ಳಿ
“ಚನ್ನಪಟ್ಟಣದ ಪ್ರತಿ ಹಳ್ಳಿಯನ್ನು ಅಭಿವೃದ್ಧಿಪಡಿಸುವುದು ನಮ್ಮ ಗುರಿ. ಮುಖ್ಯಮಂತ್ರಿಗಳು ತಾಲೂಕಿನ ಅಭಿವೃದ್ಧಿಗೆ 150 ಕೋಟಿ ವಿಶೇಷ ಅನುದಾನ ಕೊಟ್ಟಿದಾರೆ. ವಸತಿ ಸಚಿವರು 5,000 ಮನೆಗಳನ್ನು ಮಂಜೂರು ಮಾಡಿದ್ದಾರೆ. ಸೈಟ್ಗಳನ್ನು ಹಂಚಲು ಅನೇಕ ಕಡೆ ಜಾಗಗಳನ್ನು ಪರಿಶೀಲನೆ ಮಾಡಲಾಗಿದೆ. ನಮಗೆ ಅವಕಾಶ ಸಿಕ್ಕಾಗಲೆಲ್ಲ ನಿಮ್ಮ ಅಭಿವೃದ್ಧಿಯ ಬಗ್ಗೆ ಯೋಚನೆ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಚನ್ನಪಟ್ಟಣದ ಜನತೆಯ ಕೈಬಿಡುವುದಿಲ್ಲ. ಪಕ್ಷ ಭೇದ ಮರೆತು ಅವಕಾಶಗಳನ್ನು ಬಳಸಿಕೊಳ್ಳಿ” ಎಂದರು.
ನೀವು ನಮ್ಮ ಕೈ ಬಲಪಡಿಸಿ, ನಾವು ನಿಮ್ಮ ಋಣ ತೀರಿಸುತ್ತೇವೆ: ಡಿಸಿಎಂ ಡಿ.ಕೆ. ಶಿವಕುಮಾರ್
ಆಸ್ತಿ ತೆರಿಗೆ ಪಾವತಿದಾರರಿಗೆ ಗುಡ್ ನ್ಯೂಸ್: ಸೆ.14ರವರೆಗೆ ಶೇ.5ರ ರಿಯಾಯಿತಿ ವಿಸ್ತರಣೆ
ಬ್ಯಾಂಕ್ ಗ್ರಾಹಕರೇ ಗಮನಿಸಿ : `ಸೆಪ್ಟೆಂಬರ್’ ತಿಂಗಳಲ್ಲಿ ಬ್ಯಾಂಕುಗಳಿಗೆ 15 ದಿನ ರಜೆ!Bank Holidays