ಮಂಡ್ಯ : ದಲಿತ ಮಹಿಳೆ ಬಗ್ಗೆ ಸಾರ್ವಜನಿಕವಾಗಿ ಅವಹೇಳನಕಾರಿ ಹೇಳಿಕೆ ನೀಡಿ ನಿಂದಿಸಿರುವ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಶಾಸಕ ಸ್ಥಾನವನ್ನು ವಜಾಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಶನಿವಾರ ಪ್ರತಿಭಟನೆ ನಡೆಸಿದರು.
ಮದ್ದೂರು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗ ಜಮಾಯಿಸಿದ ಪದಾಧಿಕಾರಿಗಳು ಯತ್ನಾಳ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಶಾಸಕ ಯತ್ನಾಳ್ ಪ್ರತಿಕೃತಿಯನ್ನು ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ದಹಿಸಲು ಮುಂದಾದ ವೇಳೆ ಇನ್ಸ್ಪೆಕ್ಟರ್ ವೆಂಕಟೇಗೌಡ ಅವರು ಮಧ್ಯ ಪ್ರವೇಶಿಸಿ ಪ್ರತಿಭಟನಾಕಾರರ ಮನವೊಲಿಸಿ ವಿಫಲಗೊಳಿಸಿದರು.
ಬಳಿಕ ತಾಲೂಕು ಕಛೇರಿಗೆ ಆಗಮಿಸಿ ಘೋಷಣೆ ಕೂಗಿ ಕಿಡಿಕಾರಿದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮೈಸೂರು ವಿಭಾಗೀಯ ಸಂಚಾಲಕ ಮರಳಿಗ ಶಿವರಾಜ್ ಮಾತನಾಡಿ, ದಸರಾ ಕಾರ್ಯಕ್ರಮ ಉದ್ಘಾಟನೆ ವಿಷಯವಾಗಿ ಮಾಧ್ಯಮದ ಮುಂದೆ ಯತ್ನಾಳ್ ಮಾತನಾಡುವಾಗ ಅವಮಾನಕರ ಹೇಳಿಕೆ ನೀಡಿದ್ದಾರೆ. ಚಾಮುಂಡೇಶ್ವರಿ ದೇವಿಗೆ ಸನಾತನ ಧರ್ಮದ ಮಹಿಳೆಯರು ಮಾತ್ರ ಪೂಜೆ ಸಲ್ಲಿಸಬೇಕೆ ಹೊರತು ಸಾಮಾನ್ಯ ದಲಿತ ಮಹಿಳೆಗೂ ಪೂಜೆಗೂ ಅವಕಾಶವಿಲ್ಲವೆಂದಿದ್ದಾರೆ. ಈ ಮೂಲಕ ದಲಿತ ಮಹಿಳೆಯರನ್ನು ಸಾರ್ವಜನಿಕವಾಗಿ ಅವಮಾನಿಸಿ ನಿಂದಿಸಿದ್ದಾರೆ ಎಂದು ಆರೋಪಿಸಿದರು.
ಕೆಲ ದಿನಗಳ ಹಿಂದೆ ಮದ್ದೂರಿನಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ನಡೆದಿದ್ದ ಗಲಭೆ ಹಿನ್ನೆಲೆ ಬಳಿಕ ಮದ್ದೂರು ಪಟ್ಟಣಕ್ಕೆ ಆಗಮಿಸಿ ನಾವೆಲ್ಲ ಹಿಂದೂ ನಾವೆಲ್ಲ ಒಂದು ಎಂಬ ಹೇಳಿಕೆ ನೀಡಿ ಬೇರೆ ಕಡೆ ದಲಿತ ಮಹಿಳೆ ವಿರುದ್ಧ ಸಾರ್ವಜನಿಕವಾಗಿ ಅವಮಾನ ಮಾಡಿದ್ದಾರೆ ಎಂದು ಕಿಡಿಕಾರಿದರು.
ಇಂತಹ ದಲಿತ ವಿರೋಧಿ ಹೇಳಿಕೆ ನೀಡಿರುವುದು ಖಂಡನೀಯ. ಸನಾತನ ಧರ್ಮದ ಹೆಸರಿನಲ್ಲಿ ಕೋಮು ಭಾವನೆ ಕೆರಳಿಸಿದ್ದಾರೆ. ಯತ್ನಾಳ್ ನಿತ್ಯ ಒಂದಿಲ್ಲೋಂದು ಪ್ರಚೋದನಕಾರಿ ಕೋಮು ಸಂಘರ್ಷ ಹೇಳಿಕೆ ನೀಡುತ್ತಿರುವುದರಿಂದಲೇ ಬಿಜೆಪಿ ಪಕ್ಷವು ಅವರನ್ನು ವಜಾ ಮಾಡಿದೆ. ಇವರ ಮೇಲೆ ಈಗಾಗಲೇ 60 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಈ ಹೇಳಿಕೆಯನ್ನು ಖಂಡಿಸಿ ಕೆಲ ದಿನಗಳ ಹಿಂದೆಯೂ ಪ್ರಕರಣ ಕೂಡ ದಾಖಲಾಗಿದ್ದರು ಸಹ ನ್ಯಾಯಲಯ ಅವರಿಗೆ ಬಲವಂತದ ಕ್ರಮ ಬೇಡ ಎಂದು ಆದೇಶ ಹೊರಡಿಸಿದೆ. ಆದರೆ, ಮಾನ್ಯ ನ್ಯಾಯಾಧೀಶರು ಇಂತಹ ಆದೇಶ ನೀಡಿರುವುದು ಸರಿಯಾದ ಕ್ರಮವಲ್ಲ. ಹೀಗಾಗಿ ಆದಷ್ಟು ಬೇಗ ಯತ್ನಾಳ್ ಅವರನ್ನು ಬಂಧಿಸಬೇಕು. ಮತ್ತು ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಸ್ಪೀಕರ್ ಅವರಿಗೆ ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ ಮೂಲಕ ಪ್ರತಿಭಟನಾಕಾರರರು ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಪ್ರಕಾಶ್, ಶೇಖರ್, ವೆಂಕಟೇಶ್, ರಾಚಯ್ಯ, ಚಿದಾನಂದ, ಶಿವಲಿಂಗಯ್ಯ, ರಾಜೇಂದ್ರ, ಸಿದ್ದರಾಜು, ಕುಮಾರ್, ರಾಜು, ಮಹೇಶ್, ಚಿಕ್ಕಯ್ಯ, ನಾರಾಯಣ, ಮಂಜುನಾಥ್ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
19 ವರ್ಷದ ಯುವಕನನ್ನು ಮದುವೆಯಾದ 19 ವರ್ಷದ ಯುವತಿ ವಿರುದ್ಧ ಕೇಸ್ ದಾಖಲು
ನಿಮ್ಮ ಫೋನ್ ಸೈಲೆಂಟ್ ಆಗಿದ್ರೂ ಅಥ್ವಾ ಕಳೆದು ಹೋದ್ರೂ ನಿಮಿಷದಲ್ಲೇ ಪತ್ತೆ ಮಾಡ್ಬೋದು ; ಹೇಗೆ ಗೊತ್ತಾ?