ಬೆಂಗಳೂರು : ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಮತ್ತು ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.ಸೋಮವಾರ ನಗರದ ಮಾರುತಿ ಮಂದಿರಕ್ಕೆ ಭೇಟಿ ನೀಡಿದ ಮುಜರಾಯಿ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ವಿಶೇಷ ಪೂಜೆ ನೆರವೇರಿಸಿ ಭಕ್ತರಿಗೆ ಸಿಹಿ ಹಂಚಿದರು.
ನಂತರ ಮಾತನಾಡಿದ ಅವರು, ನೂರಾರು ವರ್ಷಗಳಿಂದ ಶ್ರೀರಾಮಚಂದ್ರನನ್ನು ಭಾರತೀಯರು ಪೂಜಿಸಿ ಗೌರವಿಸಿಕೊಂಡು ಬಂದಿದ್ದಾರೆ. ಆದರೆ, ಇಂದು ಕೆಲ ರಾಜಕೀಯ ಪಕ್ಷಗಳು ಧರ್ಮದ ಪಾವಿತ್ರ್ಯಕ್ಕೆ ರಾಜಕೀಯ ಬೆರೆಸುತ್ತಿದ್ದಾರೆ. ನಾವು ಆ ರೀತಿಯಲ್ಲಿ
ಮಾಡುವುದಿಲ್ಲ. ಧರ್ಮವೇ ಬೇರೆ, ರಾಜಕೀಯವೇ ಬೇರೆ. ರಾಜಕಾರಣದಲ್ಲಿ ಧರ್ಮ ತರುವುದಿಲ್ಲ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ನಗರವೂ ಸೇರಿದಂತೆ ರಾಜ್ಯಾದ್ಯಂತ ರಾಮನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿದೆ.ದೇವಾಲಯಗಳಲ್ಲಿ ಭಕ್ತಾಧಿಗಳಿಗೆ ಲಾಡು, ಸಿಹಿ, ಪುಳಿಯೊಗರೆ ಸೇರಿದಂತೆ ವಿವಿಧ ಪ್ರಸಾದಗಳನ್ನು ಹಂಚಲಾಗಿದೆ.
ದೇಶದಲ್ಲಿ ಲಕ್ಷಾಂತರ ರಾಮ, ಆಂಜನೇಯನ ದೇವಾಲಯಗಳಿಗೆ. ಎಲ್ಲೆಡೆಯೂ ವಿಶೇಷ ಪೂಜೆ ಕೂಡ ನಡೆಯುತ್ತಿದೆ. ಪ್ರತಿಯೊಬ್ಬರು ದಿನವೂ ಪೂಜೆ ಮಾಡಿಯೇ ಕೆಲಸಗಳಿಗೆ ತೆರಳುತ್ತಾರೆ. ಈ ಸಂಸ್ಕೃತಿ ಅನಾದಿ ಕಾಲದಿಂದಲೂ ನಮ್ಮಲ್ಲಿದ್ದು ಬಿಜೆಪಿಯಿಂದ ಕಲಿಯುವುದು ಏನೂ ಇಲ್ಲ ಎಂದು ಸಚಿವರು ತಿಳಿಸಿದರು.