ದೆಹಲಿ : ದೆಹಲಿ ಹೈ ಕೋರ್ಟ್ ನಿಂದ ಮಂಗಳವಾರದಂದು ರಿಲಯನ್ಸ್ ಪರವಾಗಿ ಮಹತ್ವದ ಆದೇಶವೊಂದು ಬಂದಿದೆ. ಇದರಿಂದಾಗಿ ಭಾರತದಲ್ಲಿ ಪ್ರಬಲವಾಗಿ ಬೆಳವಣಿಗೆ ಕಾಣುತ್ತಿರುವ ಎಫ್ಎಂಸಿಜಿ ಹಾಗೂ ಇ-ಕಾಮರ್ಸ್ ವಲಯಗಳಿಗೆ ಬ್ರ್ಯಾಂಡ್ ರಕ್ಷಣೆ ದೊರೆತಂತಾಗಿದೆ. ಆನ್ ಲೈನ್ ರೀಟೇಲ್ ಅಂತ ಬಂದರೆ ಅಲ್ಲಿ “ಲೋಗೋ”ಗಳು ಹಾಗೂ ಬ್ರ್ಯಾಂಡ್ ಹೆಸರೇ ಮೂಲಭೂತವಾಗಿ ಗ್ರಾಹಕರು ತಮಗೆ ಬೇಕಾದ ಉತ್ಪನ್ನಗಳನ್ನು ಗುರುತಿಸುವ ಸುಳುಹುಗಳಾಗಿರುತ್ತವೆ. ಇಲ್ಲದಿದ್ದರೆ ಇದರಿಂದ ಗೊಂದಲ ಆಗುವ ಸಾಧ್ಯತೆ ಬಹಳ ಹೆಚ್ಚಿರುತ್ತದೆ ಎಂದು ಹೇಳಲಾಗಿದೆ. ರಿಲಯನ್ಸ್ ಮತ್ತು ಜಿಯೋ ಟ್ರೇಡ್ ಮಾರ್ಕ್ ಗಳನ್ನು ಉಲ್ಲಂಘನೆ ಮಾಡಿರುವಂಥ ಉತ್ಪನ್ನಗಳನ್ನು ಅಮೆಜಾನ್, ಫ್ಲಿಪ್ ಕಾರ್ಟ್ ಸೇರಿದಂತೆ ಎಲ್ಲ ಪ್ರಮುಖ ಆನ್ ಲೈನ್ ಮಾರ್ಕೆಟ್ ಪ್ಲೇಸ್ ಗಳು “ಡೀಲಿಸ್ಟ್” ಮಾಡಬೇಕು, ಅಂದರೆ ಆ ಉತ್ಪನ್ನಗಳನ್ನು ಮಾರಾಟ ಮಾಡುವುದರಿಂದ ತೆಗೆಯಬೇಕು ಎಂದು ಆದೇಶಿಸಲಾಗಿದೆ.
ನ್ಯಾಯಮೂರ್ತಿಗಳಾದ ಸೌರಭ್ ಬ್ಯಾನರ್ಜಿ ಅವರು ಈ ಸಂಬಂಧವಾಗಿ ಮಧ್ಯಂತರ ಆದೇಶವನ್ನು ಹೊರಡಿಸಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಟ್ರೇಡ್ ಮಾರ್ಕ್ಸ್ ತಪ್ಪಾಗಿ ಬಳಸಿಕೊಂಡು ಗ್ರಾಹಕ ಉತ್ಪನ್ನಗಳನ್ನು ಉತ್ಪಾದಿಸುವುದು, ಮಾರಾಟ ಮಾಡುವುದು ಅಥವಾ ಪ್ರಚಾರ ಮಾಡುವುದನ್ನು ಕೋರ್ಟ್ ಆದೇಶದ ಮೂಲಕ ತಡೆಯಲಾಗಿದೆ. ಅನಧಿಕೃತವಾಗಿ ರಿಲಯನ್ಸ್ ಬ್ರ್ಯಾಂಡ್ ಗುರುತನ್ನು ಬಳಕೆ ಮಾಡುವುದು ತಪ್ಪಾದ ಪ್ರಾತಿನಿಧ್ಯ ಹಾಗೂ ಉತ್ಪನ್ನಗಳು ಅಧಿಕೃತವಾಗಿ ರಿಲಯನ್ಸ್ ನಿಂದ ಉತ್ಪಾದಿಸಲಾಗಿದೆ ಅಥವಾ ಮಾನ್ಯತೆ ಪಡೆದಿದೆ ಎಂದು ನಂಬುವಂತೆ ಮಾಡಿ, ಗ್ರಾಹಕರನ್ನು ದಿಕ್ಕು ತಪ್ಪಿಸುವಂಥ ಕೃತ್ಯವಾಗುತ್ತದೆ ಎಂದು ಕೋರ್ಟ್ ತಿಳಿಸಿದೆ.
ಡಿಜಿಟಲ್ ಪ್ಲಾಟ್ ಫಾರ್ಮ್ ಗಳಲ್ಲಿ ಟ್ರೇಡ್ ಮಾರ್ಕ್ ಉಲ್ಲಂಘನೆಯಂಥ ಹಲವು ಪ್ರಕರಣಗಳನ್ನು ಗಮನಕ್ಕೆ ತಂದು, ರಿಲಯನ್ಸ್ ಇಂಡಸ್ಟ್ರೀಸ್ ನಿಂದ ದಾವೆ ಹೂಡಲಾಗಿತ್ತು. ಅದನ್ನು ಪರಾಮರ್ಶಿಸಿ ಕೋರ್ಟ್ ನಿಂದ ಇಂಜಂಕ್ಷನ್ ನೀಡಲಾಗಿದೆ. ಎಫ್ಎಂಸಿಜಿ ಕಂಪನಿಗಳು ತಮ್ಮ ತಾಜಾ ಉತ್ಪನ್ನಗಳು, ಡೇರಿ ಉತ್ಪನ್ನಗಳು, ದಿನಸಿ ಪದಾರ್ಥಗಳು ಇವಕ್ಕೆ ರಿಲಯನ್ಸ್ ನ ಹೆಸರಾಂತ ಬ್ರ್ಯಾಂಡ್ ಗಳನ್ನು ದುರುಪಯೋಗ ಮಾಡುತ್ತಿದ್ದುದು ಗಮನಕ್ಕೆ ಬಂದಿತ್ತು. ಇದರಿಂದಾಗಿ ಕಂಪನಿಯ ವರ್ಚಸ್ಸು ಮತ್ತು ಗ್ರಾಹಕರ ನಂಬಿಕೆ- ವಿಶ್ವಾಸಕ್ಕೆ ಧಕ್ಕೆ ಆಗುವ ಸಾಧ್ಯತೆಗಳು ಇದ್ದುದರಿಂದ ಈ ಬಗ್ಗೆ ರಿಲಯನ್ಸ್ ನಿಂದ ಕೋರ್ಟ್ ಮೆಟ್ಟಿಲೇರಲಾಗಿತ್ತು.
ನ್ಯಾಯಮೂರ್ತಿಗಳಾದ ಬ್ಯಾನರ್ಜಿ ಅವರು ತಮ್ಮ ಆದೇಶದಲ್ಲಿ ಪ್ರಸ್ತಾವ ಮಾಡಿರುವಂತೆ, ರಿಲಯನ್ಸ್ ಮತ್ತು ಜಿಯೋದ ಟ್ರೇಡ್ ಮಾರ್ಕ್ಸ್ ಮತ್ತು ಕಲಾತ್ಮಕ ಸ್ವತ್ತಿನ ಬಳಕೆಯನ್ನು ಅನಧಿಕೃತವಾಗಿ ಮಾಡುವುದರಿಂದ ಆ ಉತ್ಪನ್ನದ ಮೂಲ ಹಾಗೂ ಖಚಿತತೆ ಬಗ್ಗೆ ತಪ್ಪಾದ ಅಭಿಪ್ರಾಯ ಮೂಡುತ್ತದೆ. ಅದು ನೇರವಾಗಿ ಗ್ರಾಹಕರು ಮತ್ತು ಬ್ರ್ಯಾಂಡ್ ಗೌರವ- ನಂಬಿಕೆ ಮೇಲೆ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ರಿಲಯನ್ಸ್ ಪರವಾಗಿ ಅಂಕಿತ್ ಸಾಹ್ನಿ ಮತ್ತು ಕೃತ್ತಿಕಾ ಸಾಹ್ನಿ (ಪಾಲುದಾರರು), ಚಿರಾಗ್ ಅಹ್ಲುವಾಲಿಯಾ (ಹಿರಿಯ ವಕೀಲರು) ಮತ್ತು ಮೋಹಿತ್ ಮರು (ಅಸೊಸಿಯೇಟ್) ಪ್ರತಿನಿಧಿಸಿದ್ದರು. ಇವರು ಅಜಯ್ ಸಾಹ್ನಿ ಅಂಡ್ ಅಸೋಸಿಯೇಟ್ಸ್ ನವರು.
BREAKING: ರಾಜ್ಯದ ಎಲ್ಲಾ ಮಲ್ಟಿಪ್ಲೆಕ್ಸ್, ಚಿತ್ರಮಂದಿರಗಳಲ್ಲಿ ಏಕರೂಪದ ದರ ಜಾರಿಗೊಳಿಸಿ ಸರ್ಕಾರ ಆದೇಶ
ಮಾಧ್ಯಮ ಸಂಜೀವಿನಿ ಯೋಜನೆ ಎಲ್ಲಾ ಪತ್ರಕರ್ತರಿಗೂ ವಿಸ್ತರಿಸಿ: ಸಿಎಂಗೆ KUWJ ಅಧ್ಯಕ್ಷ ಶಿವಾನಂದ ತಗಡೂರು ಆಗ್ರಹ