ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ನಿಂದ ಶುಕ್ರವಾರ (ಏಪ್ರಿಲ್ 25) 2025ರ ಜನವರಿಯಿಂದ ಮಾರ್ಚ್ ತ್ರೈಮಾಸಿಕದ ಹಣಕಾಸು ಫಲಿತಾಂಶವನ್ನು ಪ್ರಕಟಿಸಲಾಗಿದೆ. ಕಂಪನಿಯಿಂದ ಪ್ರತಿ ಷೇರಿಗೆ 5.50 ರೂಪಾಯಿ ಡಿವಿಡೆಂಡ್ ಘೋಷಣೆ ಮಾಡಿದ್ದು, 25,000 ಕೋಟಿ ರೂಪಾಯಿಯನ್ನು ನಾನ್ ಕನ್ವರ್ಟ್ ಬಲ್ ಡಿಬೆಂಚರ್ (ಎನ್ ಸಿಡಿ) ಮೂಲಕ ಸಂಗ್ರಹಿಸುವ ಯೋಜನೆಗೆ ಮಂಜೂರಾತಿ ನೀಡಿರುವುದಾಗಿ ತಿಳಿಸಲಾಗಿದೆ.
ಈ ಅವಧಿಯಲ್ಲಿ ಕಂಪನಿಯ ನಿವ್ವಳ ಲಾಭವು ಶೇಕಡಾ 2.4ರಷ್ಟು ಹೆಚ್ಚಳವಾಗಿ 19,407 ಕೋಟಿ ರೂಪಾಯಿ ಬಂದಿದೆ. ಮಾರ್ಚ್ 31ಕ್ಕೆ ಕೊನೆಯಾದ ಅವಧಿಗೆ ಕಂಪನಿಯ ಆದಾಯವು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 8.8ರಷ್ಟು ಹೆಚ್ಚಳವಾಗಿ 2.88 ಲಕ್ಷ ಕೋಟಿ ರೂಪಾಯಿ ಆಗಿದೆ.
ಅಂದ ಹಾಗೆ ನಿವ್ವಳ ಮೌಲ್ಯ ಹತ್ತು ಲಕ್ಷ ಕೋಟಿ ರೂಪಾಯಿ ದಾಟಿದ ಭಾರತದ ಮೊದಲ ಕಂಪನಿ ಎಂದೆನಿಸಿಕೊಂಡಿದೆ ರಿಲಯನ್ಸ್ ಇಂಡಸ್ಟ್ರೀಸ್.
ರಿಲಯನ್ಸ್ ಇಂಡಸ್ಟ್ರೀಸ್ ಅಂಗಸಂಸ್ಥೆಯ ಡಿಜಿಟಲ್ ಸೇವೆಗಳು ಅತ್ಯುತ್ತಮ ಸಾಧನೆ ಮಾಡಿದೆ. ಕಂಪನಿಯ ಇಬಿಐಟಿಡಿಎ ಶೇಕಡಾ 18.5ರಷ್ಟು ಮೇಲೇರಿದೆ. ಇಲ್ಲಿ ಗಮನಿಸಬೇಕಾದ ಅಂಶ ಏನೆಂದರೆ, ಕಂಪನಿಯ 5ಜಿ ಬಳಕೆದಾರರ ಸಂಖ್ಯೆ ಸರಿ ಸುಮಾರು 19.1 ಕೋಟಿ ಆಗಿದ್ದು, ಪ್ರತಿ ಬಳಕೆದಾರರಿಂದ ಬರುವಂಥ ಸರಾಸರಿ ಆದಾಯವು 206.2 ರೂಪಾಯಿ ಆಗಿದೆ. ದರ ಪರಿಷ್ಕರಣೆ ಆದ ಮೇಲೆ ಆಗಿರುವಂಥ ಬೆಳವಣಿಗೆ ಇದಾಗಿದೆ. ಜಿಯೋ ಪ್ಲಾಟ್ ಫಾರ್ಮ್ಸ್ ನಿವ್ವಳ ಲಾಭವು 7,022 ಕೋಟಿ ರೂಪಾಯಿ ಬಂದಿದ್ದು, ಕಳೆದ ವರ್ಷ ಮಾರ್ಚ್ ಕೊನೆಯ ಇದೇ ಅವಧಿಗೆ 5,587 ಕೋಟಿ ರೂಪಾಯಿ ಲಾಭ ಗಳಿಸಿತ್ತು.
ರಿಲಯನ್ಸ್ ರೀಟೇಲ್ ಇಬಿಐಟಿಡಿಎ ಶೇ 14.3ರಷ್ಟು ಬೆಳೆದಿದೆ. ಶೇಕಡಾ 29ರಷ್ಟು ಲಾಭದ ಏರಿಕೆಯಾಗಿ 3,545 ಕೋಟಿಗೆ ಮುಟ್ಟಿದೆ. ಪ್ರಬಲವಾದ ಮಳಿಗೆ ಕಾರ್ಯ ನಿರ್ವಹಣೆ ಮೆಟ್ರಿಕ್ಸ್ ಹಾಗೂ ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ 2.4 ಪಟ್ಟು ಹೈಪರ್- ಲೋಕಲ್ ಡೆಲಿವರಿ ವ್ಯವಹಾರದಲ್ಲಿ ಬೆಳವಣಿಗೆ ಆಗಿದೆ. ಎರಡು ವರ್ಷದ ಹಿಂದಷ್ಟೇ ಎಫ್ಎಂಸಿಜಿ ಘಟಕವನ್ನು ಆರಂಭಿಸಲಾಗಿತ್ತು. ಅದೀಗ 11,450 ಕೋಟಿ ರೂಪಾಯಿ ಮಾರಾಟ ಮಾಡಿದ್ದು, ಈ ಮೂಲಕ ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಎಫ್ಎಂಸಿಜಿ ಆರಂಭಿಕ ಕಂಪನಿ ಎನಿಸಿದೆ.
ತೈಲದಿಂದ ರಾಸಾಯನಿಕ (ಒಟುಸಿ) ವ್ಯವಹಾರದಲ್ಲಿನ ಇಬಿಐಟಿಡಿಎ ಶೇಕಡಾ ಹತ್ತರಷ್ಟು ಇಳಿಕೆ ಕಂಡು, 15,080 ಕೋಟಿ ರೂಪಾಯಿ ಮುಟ್ಟಿದೆ. ತೈಲ ಹಾಗೂ ಅನಿಲ ವ್ಯವಹಾರದ ಇಬಿಐಟಿಡಿಎ ಶೇಕಡಾ 8.6 ಇಳಿಕೆ ಕಂಡು, 5,123 ಕೋಟಿ ರೂಪಾಯಿ ಮುಟ್ಟಿದೆ.
ಕಳೆದ ಹಣಕಾಸು ವರ್ಷದ ಒಟ್ಟಾರೆ ಅದಾಯವು ಶೇ 7.1ರಷ್ಟು ಏರಿಕೆಯಾಗಿ, 10.71 ಲಕ್ಷ ಕೋಟಿ ರೂಪಾಯಿ ಆಗಿದೆ. ಇನ್ನು ಇಬಿಐಟಿಡಿಎ ಶೇ 2.9ರಷ್ಟು ಮೇಲೇರಿ 1.83 ಲಕ್ಷ ಕೋಟಿ ರೂಪಾಯಿ ತಲುಪಿದೆ. ನಿವ್ವಳ ಲಾಭವು ಶೇ 2.9ರಷ್ಟು ಹೆಚ್ಚಳವಾಗಿ, 81,309 ಕೋಟಿ ರೂಪಾಯಿ ಆಗಿದೆ. ತೈಲ ಹಾಗೂ ಅನಿಲ ಇಬಿಐಟಿಡಿಎ ಸಾರ್ವಕಾಲಿಕ ದಾಖಲೆಯ ಎತ್ತರದ 21,188 ಕೋಟಿ ರೂಪಾಯಿ ಮುಟ್ಟಿದೆ. ಇದೇ ಮೊದಲ ಬಾರಿಗೆ ರೀಟೇಲ್ ಅಂಗದ ಇಬಿಐಟಿಡಿಎ 25,000 ಕೋಟಿ ರೂಪಾಯಿ ದಾಟಿದೆ. ಜಿಯೋ ಪ್ಲಾಟ್ ಫಾರ್ಮ್ಸ್ ಲಾಭವು ಶೇಕಡಾ 22ರಷ್ಟು ಮೇಲೇರಿ 25,000 ಕೋಟಿ ದಾಟಿದೆ.
ವಯಾಕಾಮ್18 ಮತ್ತು ಡಿಸ್ನಿಯ ಸ್ಟಾರ್ ಇಂಡಿಯಾ ವಿಲೀನದ ನಂತರ ಜಿಯೋಸ್ಟಾರ್ 10,006 ಕೋಟಿ ರೂಪಾಯಿ ಆದಾಯವನ್ನು ವರದಿ ಮಾಡಿದೆ. “ಐಸಿಸಿ ಚಾಂಪಿಯನ್ಸ್ ಟ್ರೋಫಿ, ಐಪಿಎಲ್ ಪ್ರಮುಖ ಕ್ರೀಡಾಕೂಟಗಳಿಂದ ಮತ್ತು 320 ಸಾವಿರ ಗಂಟೆಗಳಿಗಿಂತ ಹೆಚ್ಚಿನ ಭಾರತದ ಅತಿದೊಡ್ಡ ಡಿಜಿಟಲ್ ಕಂಟೆಂಟ್ ಲೈಬ್ರರಿಯಂಥ ಜಿಯೋಹಾಟ್‌ಸ್ಟಾರ್ ಮಾರ್ಚ್ 2025 ರಲ್ಲಿ 50.3 ಕೋಟಿ ಎಂಎಯುಗಳಿಗೆ ಸೇವೆ ಸಲ್ಲಿಸಿದೆ” ಎಂದು ಕಂಪನಿ ತಿಳಿಸಿದೆ. ಜಿಯೋಸ್ಟಾರ್ ಟಿವಿ ನೆಟ್‌ವರ್ಕ್ ಟಿವಿ ಎಂಟರ್‌ಟೈನ್‌ಮೆಂಟ್‌ನಲ್ಲಿ ಶೇ 34ರಷ್ಟು ಮಾರುಕಟ್ಟೆ ಪಾಲನ್ನು ಗಳಿಸಿದೆ ಮತ್ತು ದೇಶಾದ್ಯಂತ 76. ಕೋಟಿ ಮಾಸಿಕ ವೀಕ್ಷಕರನ್ನು ತಲುಪಿದೆ.
ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ತಂತ್ರಜ್ಞಾನ ಚಾಲಿತ ಶಿಕ್ಷಣಕ್ಕೆ ‘ರಿಯಲ್ ಮಿ, ಭೂಮಿ’ ನೆರವು