ಬೆಂಗಳೂರು: ಸ್ವಾತಂತ್ರ್ಯ ಭಾರತವನ್ನು ಹೇಗೆ ಇಟ್ಟುಕೊಳ್ಳಬೇಕು. ಗಳಿಸಿದ ಸ್ವಾತಂತ್ರ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದರ ಬಗ್ಗೆ ಇಂದಿನ ಯುವಜನತೆ ಯೋಚನೆ ಮಾಡುವುದಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.
ನೇತಾಜಿ ಸುಭಾಶ್‌ಚಂದ್ರ ಬೋಸ್ ಟ್ರಸ್ಟ್, ಸನ್‌ಸ್ಟಾರ್ ಪಬ್ಲಿಷರ್ಸ್ ವತಿಯಿಂದ ನಗರದ ಟೌನ್‌ಹಾಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ. ಕೆ.ಈ.ರಾಧಾಕೃಷ್ಣ ಅವರು ಅನುವಾದಿಸಿರುವ ನೇತಾಜಿ ಸುಭಾಶ್‌ಚಂದ್ರ ಬೋಸ್ ರವರ ‘ಒಂದು ಅಪೂರ್ಣ ಆತ್ಮಕಥೆ’, ‘ಭಾರತೀಯ ಹೋರಾಟ’, ‘ಅಸಾಮಾನ್ಯ ದಿನಚರಿ’ ಮೂರು ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಮಹಾತ್ಮ ಗಾಂಧೀಜಿ, ನೇತಾಜಿ ಸುಭಾಶ್‌ಚಂದ್ರ ಬೋಸ್ ಸೇರಿದಂತೆ ಹಲವರು ಸ್ವಾತಂತ್ರ್ಯ ತಂದುಕೊಟ್ಟಿರುವ ಬಗ್ಗೆ ಮುಂದಿನ ಪೀಳಿಗೆ ಹೇಗೆ ಯೋಚಿಸುತ್ತಿದೆ ಎಂಬುದು ಮುಖ್ಯವಾಗಿದೆ. ಇಲ್ಲವಾದರೆ ದೇಶಕ್ಕೆ ಸ್ವಾತಂತ್ರ್ಯ ಹಾಗೆಯೇ ಬಂದಿದೆ ಎಂಬ ಭಾವನೆ ಅವರಲ್ಲಿ ಬರುತ್ತದೆ ಎಂದರು.
ದೇಶಕ್ಕೆ ಸ್ವಾತಂತ್ರ್ಯ ಗಳಿಸಲು ಏನು ಬೇಕಾದರು ತ್ಯಾಗ ಮಾಡುತ್ತೇನೆ. ಬ್ರಿಟೀಷರನ್ನು ದೇಶದಿಂದ ತೊಲಗಿಸಿ, ದೇಶಕ್ಕೆ ಎಷ್ಟು ಬೇಗ ಸ್ವಾತಂತ್ರ್ಯವನ್ನು ತಂದುಕೊಡಬೇಕು ಎಂಬ ಉದ್ದೇಶದ ಇಚ್ಛಾಶಕ್ತಿಯನ್ನು ನೇತಾಜಿ ಅವರು ಹೊಂದಿದ್ದರು.
ಸ್ವಾತಂತ್ರ್ಯಕ್ಕಾಗಿ ನೇತಾಜಿ ಸುಭಾಶ್‌ಚಂದ್ರ ಬೋಸ್ ಅವರು ತೆಗೆದುಕೊಂಡ ಸಿದ್ಧಾಂತದ ದಾರಿ ಹಾಗೂ ಮಹಾತ್ಮ ಗಾಂಧೀಜಿ ರವರು ದಾರಿ ಬೇರೆಯಾಗಿತ್ತು. ಆದರೆ, ಭಾರತಕ್ಕೆ ಸ್ವಾತಂತ್ರ್ಯ ತರಬೇಕು. ಭಾರತದ ಶಕ್ತಿಯನ್ನು ವಿಶ್ವಕ್ಕೆ ತೋರಿಸಬೇಕು ಎಂಬುದು ಇಬ್ಬರ ಉದ್ದೇಶವಾಗಿತ್ತು ಎಂದು ಹೇಳಿದರು.
ನೇತಾಜಿ ಸುಭಾಶ್‌ಚಂದ್ರ ಬೋಸ್ ರವರು ಸ್ವಾತಂತ್ರ್ಯಕ್ಕಾಗಿ ಅವಸರದ ದಾರಿ ಹಿಡಿದಿದ್ದರು. ನಮಗೆ ತತ್‌ಕ್ಷಣ ಸ್ವಾತಂತ್ರ್ಯ ಸಿಗಬೇಕು. ಸ್ವಾತಂತ್ರ್ಯಕ್ಕಾಗಿ ನಮ್ಮ ಪೀಳಿಗೆ ಕಾಯಲು ಸಿದ್ಧವಿಲ್ಲ ಎಂಬುದಾಗಿತ್ತು. ಮಹಾತ್ಮ ಗಾಂಧೀಜಿಯವರು ಸ್ವಾತಂತ್ರ್ಯಕ್ಕಾಗಿ ಅಹಿಂಸಾ ಮಾರ್ಗವನ್ನು ಅನುಸರಿಸಿದರು ಎಂದರು.
ನೇತಾಜಿ ಅವರು ಉದಾತ್ತ ಆರ್ಥಿಕ ತಜ್ಞರಾಗಿದ್ದರು. ಅವರು ತೆಗೆದುಕೊಂಡ ತೀರ್ಮಾನಗಳು ಭಾರತ ಆರ್ಥಿಕ ವ್ಯವಸ್ಥೆಯನ್ನು ಇಂದು ಗಟ್ಟಿಗೊಳಿಸಿದೆ. ಇಂದು ನಾವು ಭಾರತ ಆರ್ಥಿಕವಾಗಿ ಸದೃಢವಾಗಿದೆ ಎಂಬ ಕೆಚ್ಚೆದೆಯ ಮಾತುಗಳನ್ನಾಡುತ್ತೇವೆ ಎಂದರೆ, ಅದರ ಬುನಾದಿ ನೇತಾಜಿ ಅವರು ಹಾಕಿದ್ದರು ಎಂದು ಹೇಳಿದರು.
ಶಿಕ್ಷಣ ನಮ್ಮನ್ನು ಸಾಕಷ್ಟು ಬದಲಾಯಿಸಿದೆ. ಭಾರತ ಬಲಿಷ್ಠ ಭಾರತವಾಗಿದ್ದರೆ, ತಾಂತ್ರಿಕವಾಗಿ ಮತ್ತು ಆರ್ಥಿಕವಾಗಿ ಶಕ್ತಿಯುತವಾಗಿದ್ದರೆ ಅದು ಶಿಕ್ಷಣದಿಂದ ಸಾಧ್ಯವಾಗಿದೆ. ಪ್ರಪಂಚದ ಯಾವುದೇ ಭಾಗಕ್ಕೆ ಹೋದರು ಭಾರತದ ಇಂಜಿನಿಯರ್, ಡಾಕ್ಟರ್, ಪ್ರಾಧ್ಯಾಪಕರಿದ್ದಾರೆ. ಈ ಸಾಧನೆ ರಾಜಕೀಯ ಪಕ್ಷಗಳಿಂದ ಸಾಧ್ಯವಾಗಿಲ್ಲ. ಜನರಿಂದ ಸಾಧ್ಯವಾಗಿದೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂದರು.
ನೇತಾಜಿ ಅವರು 1942ರಲ್ಲಿ ಜರ್ಮನಿಗೆ ಹೋದರು. 1945ರಲ್ಲಿ ತೀರಿಕೊಂಡರು ಎಂಬ ಇತಿಹಾಸವನ್ನು ಓದಿದ್ದೇವೆ. ಆದರೆ, ಅವರು ತೀರಿಕೊಂಡಿಲ್ಲ ಎಂಬ ವಾದವೂ ಇದೆ. ಈ ಬಗ್ಗೆ ಚರ್ಚಿಸಲು ಹೋಗುವುದಿಲ್ಲ. ನೇತಾಜಿ ಅವರು ದೈಹಿಕವಾಗಿ ನಮ್ಮ ಜೊತೆ ಇಲ್ಲದೇ ಇರಬಹುದು. ಅವರ ಆದರ್ಶಗಳು ನಮ್ಮ ಜೊತೆಗಿವೆ. ಆದರ್ಶಗಳು, ಸಿದ್ಧಾಂತಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು.
ಪ್ರೊ. ಕೆ.ಈ.ರಾಧಾಕೃಷ್ಣ ಅವರು ಕನ್ನಡ, ಇಂಗ್ಲಿಷ್, ಸಂಸ್ಕೃತ, ಮಲಯಾಳಂ, ಉರ್ದು ಭಾಷೆಗಳಲ್ಲಿ ಅನುವಾದ ಮಾಡುತ್ತಾರೆ. 20 ಸಾವಿರ ಸಂಸ್ಕೃತ ಶ್ಲೋಕಗಳನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡಿ, ಜೈನ ಮಹಾಪುರಾಣವನ್ನು ಬರೆದಿದ್ದಾರೆ. ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಧ್ಯಪಕರಾಗಿ, ಪ್ರಾಂಶುಪಾಲರಾಗಿ ಹಾಗೂ ಯುಜಿಸಿ, ನ್ಯಾಕ್ ಸಂಸ್ಥೆಗಳಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ. ನೇತಾಜಿ ರವರ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿ ಅತ್ಯುತ್ತಮವಾದ ಕೆಲಸ ಮಾಡಿದ್ದಾರೆ ಎಂದರೆ ಅತಿಶಯೋಕ್ತಿ ಆಗುವುದಿಲ್ಲ ಎಂದು ಹೇಳಿದರು.
ಹೆಸರಾಂತ ಲೇಖಕರು, ಕೊಲ್ಕತ್ತಾದ ನೇತಾಜಿ ಸುಭಾಶ್‌ಚಂದ್ರ ಬೋಸ್ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಪ್ರೊ. ಸುಮಂತ್ರ ಬೋಸ್, ಭಾರತೀಯ ಸೇಬೆಯ ನಿವೃತ್ತ ಉಪ ದಂಡನಾಯಕರಾದ ಲೆ.ಜನರಲ್ ರಮೇಶ್ ಹಲಗಲಿ ಅವರು, ಲೇಖಕರಾದ ಪ್ರೊ. ಕೆ.ಈ.ರಾಧಕೃಷ್ಣ, ಬೆಂಗಳೂರಿನ ನೇತಾಜಿ ಸುಭಾಶ್‌ಚಂದ್ರ ಬೋಸ್ ಟ್ರಸ್ಟ್‌ನ ಅಧ್ಯಕ್ಷರಾದ ಎಂ.ರಾಜ್‌ಕುಮಾರ್ ಅವರು ಹಾಗೂ ಟ್ರಸ್ಟಿಗಳು ಉಪಸ್ಥಿತರಿದ್ದರು.
BREAKING: ಗಣಪತಿ ವಿಸರ್ಜನೆ ಹಿನ್ನಲೆ: ನಾಳೆ ಬೆಂಗಳೂರು ಜಿಲ್ಲೆಯಾಧ್ಯಂತ ‘ಮದ್ಯ ಮಾರಾಟ’ ನಿಷೇಧಿಸಿ DC ಆದೇಶ
‘ಹೊಸ ಆನ್ಲೈನ್ ಗೇಮಿಂಗ್ ಕಾಯ್ದೆಗೆ ನ್ಯಾಯಾಲಯಗಳು ಅಡ್ಡಿಯಾಗಲು ಸಾಧ್ಯವಿಲ್ಲ’: ಕರ್ನಾಟಕ ಹೈಕೋರ್ಟ್ ಗೆ ಕೇಂದ್ರ ಸರ್ಕಾರ