ಬೆಂಗಳೂರು : ರಾಜ್ಯದಲ್ಲಿ ಐಎಎಸ್, ಐಪಿಎಸ್, ಐಎಫ್ಎಸ್, ಕೆಎಎಸ್ ಸೇರಿದಂತೆ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿರುವ ಕೋಚಿಂಗ್ ಕೇಂದ್ರಗಳ ನೋಂದಣಿ ಕಡ್ಡಾಯವಾಗಿದ್ದು, ಈವರೆಗೆ ನೋಂದಣಿಯಾಗದ ಕೇಂದ್ರಗಳು ಮುಂದಿನ 15 ದಿನಗಳಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಕಾಲೇಜು ಶಿಕ್ಷಣ ಇಲಾಖೆ ಈ ಕುರಿತಂತೆ ಸುತ್ತೋಲೆಯನ್ನ ಹೊರಡಿಸಿದೆ.
ಈ ಸಂಬಂಧ ಇಲಾಖಾ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ಸರ್ಕಾರವು ಕರ್ನಾಟಕ ಶಿಕ್ಷಣ ಕಾಯ್ದೆಯಡಿ ಸ್ಪರ್ಧಾತ್ಮಕ ತರಬೇತಿ ಸಂಸ್ಥೆಗಳ ನೋಂದಣಿಯನ್ನು ಕಡ್ಡಾಯಗೊಳಿಸಿ ಆದೇಶಿಸಿರುವುದರಿಂದ ಸಂಬಂಧಿಸಿದ ಸಂಸ್ಥೆಗಳು 25 ಸಾವಿರ ರು. ಶುಲ್ಕ ಪಾವತಿಸಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು ಇಲ್ಲಿ ನೋಂದಣಿ ಮಾಡಿಕೊಳ್ಳಬೇಕು. ತಪ್ಪಿದರೆ ಕಾನೂನಾತ್ಮಕವಾಗಿ
ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಪ್ರತಿ ಕೇಂದ್ರವು ನೋಂದಣಿ ಸಂಖ್ಯೆ, ಪಾನ್ ಹಾಗೂ ಜಿಎಸ್ಟಿ ನಂಬರ್ ಹೊಂದಿರಬೇಕು. ವಿಶಾಲವಾದ ತರಬೇತಿ ಕೊಠಡಿಗಳು, ಸುಸಜ್ಜಿತ ಗ್ರಂಥಾಲಯ, ಅರ್ಹ ವಿದ್ಯಾರ್ಹತೆ ಹೊಂದಿದ ಬೋಧಕರು, ಪುರುಷ, ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ಹೊಂದಿರಬೇಕು. ಕೇಂದ್ರದಲ್ಲಿ ಸಿಸಿ ಕ್ಯಾಮರಾ ಅಳವಡಿಸಿರಬೇಕು. ಕಟ್ಟಡ ಕರಾರು, ಭದ್ರತಾ ಸಿಬ್ಬಂದಿ, ಅಗ್ನಿ ಸುರಕ್ಷತೆ, ಆದಾಯ ತೆರಿಗೆ ಸಲ್ಲಿಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಹೊಂದಿರಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.