ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪಶುಪಾಲನಾ ವಿಭಾಗದ ವತಿಯಿಂದ ಸಮುದಾಯ (ಬೀದಿ) ನಾಯಿಗಳಿಗೆ ಆಹಾರ ನೀಡುವ ಸಲುವಾಗಿ ಟೆಂಡರ್ ಆಹ್ವಾನಿಸಲಾಗಿದ್ದು, ಇದರ ಸಾಧಕ-ಬಾಧಕಗಳನ್ನು ಪರಿಶೀಲಿಸಿದ ನಂತರ ಅಂತಿಮ ನಿರ್ಣಯಕ್ಕೊಳಪಟ್ಟಿರುತ್ತದೆ. ಇದರ ವಿಚಾರವಾಗಿ ಹಲವಾರು ಮಾಧ್ಯಮಗಳು ವರದಿ ಮಾಡಿವೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸದರಿ ವಿಷಯವು ಹಲವು ರೂಪದಲ್ಲಿ ವರದಿ ಹಾಗೂ ವಿಶ್ಲೇಷಣಾತ್ಮಕವಾಗಿದ್ದು, ಈ ಸಂಬಂಧ ಕೆಳಕಂಡಂತೆ ಸ್ಪಷ್ಟೀಕರಣ ಮಾಹಿತಿಯನ್ನು ಒದಗಿಸಿದೆ.
* ಬಿಬಿಎಂಪಿ ಯು ಬೀದಿ ನಾಯಿಗಳಿಗೆ ಆಹಾರ ನೀಡುವುದನ್ನು ಕೋವಿಡ್ ಸಮಯದಲ್ಲಿಯೇ ಕೈಗೆತ್ತಿಕೊಂಡಿತ್ತು. ಆ ಚಟುವಟಿಕೆಯ ಮುಂದುವರಿಕೆಯಾಗಿ, ಕಳೆದ ವರ್ಷವೂ ನಿಗದಿತ ಸಂಖ್ಯೆಯಲ್ಲಿ ನಾಯಿಗಳಿಗೆ ಆಹಾರ ನೀಡಲಾಗಿತ್ತು. ಕಳೆದ ವರ್ಷದ ಕಾರ್ಯಕ್ರಮದಿಂದ ಕಲಿತ ಪಾಠಗಳ ಆಧಾರದ ಮೇಲೆ, ಈ ಯೋಜನೆಯು ಒಂದು ಸುಧಾರಣೆಯಾಗಿದೆ ಮತ್ತು ಕೇಂದ್ರ ಸರ್ಕಾರವು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ ಮೂಲಕ ವ್ಯಾಖ್ಯಾನಿಸಿದ ಪ್ರಾಣಿ ಜನನ ನಿಯಂತ್ರಣ ನಿಯಮಗಳು, 2023ರ ಪ್ರಕಾರ ಕಾನೂನಾತ್ಮಕ ಅವಶ್ಯಕತೆಯಾಗಿದೆ. ಬಿಬಿಎಂಪಿ ಈಗ ಪ್ರತಿ ವಲಯದಲ್ಲಿ ಆಹಾರ ತಯಾರಕರನ್ನು ಆಯಾ ವಲಯ ಸಹಾಯಕ ನಿರ್ದೇಶಕರು ಗುರುತಿಸಿದ ಮತ್ತು ಮೇಲ್ವಿಚಾರಣೆ ಮಾಡುವ ಆಹಾರ ನೀಡುವ ಸ್ಥಳಗಳಲ್ಲಿ ಸಮತೋಲನ ಆಹಾರವನ್ನು ಒದಗಿಸಲು ಟೆಂಡರ್ ಆಹ್ವಾನಿಸಿದೆ.
* ಬೀದಿ ನಾಯಿಗಳಿಗೆ ಆಹಾರ ನೀಡುವ ಯೋಜನೆಯಿಂದ ಸಾಕಷ್ಟು ಅನುಕೂಲಗಳಿವೆ. ಬಯಭೀತ ನಾಯಿಗಳನ್ನು ಹಿಡಿಯುವುದು ಒಂದು ದೊಡ್ಡ ಸವಾಲಾಗಿದೆ. ಅದೇ ಸಮಯದಲ್ಲಿ, ಕೆಲವು ಸ್ಥಳಗಳಲ್ಲಿ ಆಹಾರ ಲಭ್ಯತೆಯ ಕೊರತೆಯು ನಾಯಿಗಳನ್ನು ಗುಂಪುಗಾರಿಕೆಯ ನಡವಳಿಕೆಯತ್ತ ಮುಂದಾಗಿಸುತ್ತದೆ ಹಾಗು ನಾಯಿ ಕಡಿತವನ್ನು ಹೆಚ್ಚಿಸುತ್ತಿದೆ. ಆಹಾರ ಯೋಜನೆಯ ಮೂಲಕ ಅದನ್ನು ನಿಯಂತ್ರಿಸಬಹುದಾಗಿದೆ.
* ನಾಯಿಗಳನ್ನು ಹಿಡಿಯುವ ಕಾರ್ಯ ಸುಲಭವಾಗುತ್ತದೆ. ಇದರಿಂದಾಗಿ ಜನನ ನಿಯಂತ್ರಣ ಮತ್ತು ರೇಬೀಸ್ ವಿರೋಧಿ ಲಸಿಕಾಕರಣ ಪ್ರಮಾಣ ಹೆಚ್ಚಾಗುತ್ತದೆ. ಆಹಾರ ನೀಡುವ ಸ್ಥಳಗಳು ವಿಭಜಿತವಾಗಿರುವುದರಿಂದ, ಗುಂಪು ನಡೆ ಮತ್ತು ಆಹಾರಕ್ಕಾಗಿ ಆಗುವ ಆಕ್ರಮಣಕಾರಿ ವರ್ತನೆ ಕಡಿಮೆಯಾಗುತ್ತದೆ. ಈಗಾಗಲೇ ಸಾಮೂಹಿಕ ಲಸಿಕಾ ಕಾರ್ಯಕ್ರಮ ಅಭಿಯಾನವು ಪ್ರಗತಿಯಲ್ಲಿರುತ್ತದೆ. ನಾಯಿಗಳು ಸಮತೋಲನ ಆಹಾರ ಪಡೆಯುವುದರಿಂದ ಆರೋಗ್ಯವಂತ ನಾಯಿಗಳಿಂದ ಪ್ರಾಣಿಜನ್ಯ ಖಾಯಿಲೆಗಳು ಹರಡುವುದು ಕಡಿಮೆಯಾಗುತ್ತದೆ. ರೇಬೀಸ್ ಅನ್ನು ನಿಯಂತ್ರಿಸುವ ಉದ್ದೇಶದಿಂದ ಇದನ್ನು ಪ್ರಾಣಿ ಆರೋಗ್ಯ ಕಾರ್ಯಕ್ರಮದ ಮೂಲಕ ಸಾರ್ವಜನಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಮುಂದಾಗಿದೆ.
* 2.7 ಲಕ್ಷ ನಾಯಿಗಳ ಪೈಕಿ ಆಹಾರ ಇಲ್ಲದೆ ಸೊರಗುವಂತಹ ಆಯ್ದ 4,000 ನಾಯಿಗಳಿಗೆ ಮಾತ್ರ ಆಹಾರ ನೀಡಲು ಮುಂದಾಗಲಾಗಿದೆ. ವಾರ್ಡ್ ಮಟ್ಟದಲ್ಲಿ ನಿರ್ದಿಷ್ಟ ಸ್ಥಳಗಳನ್ನು ಗುರಿಯಾಗಿಸಿಕೊಂಡಾಗ ಈ ಕ್ರಿಯೆಯು ಹೆಚ್ಚಿನ ಪರಿಣಾಮವನ್ನು ಬೀರುತ್ತದೆ. ಬಿಬಿಎಂಪಿಯ ವಲಯಗಳ ಬಹತೇಕ ವಾರ್ಡ್ ಗಳಲ್ಲಿ ಈಗಾಗಲೇ ಶೇ. 70 ರಷ್ಟು ಸಂತಾನಹರಣ ಶಸ್ತ್ರ ಚಿಕಿತ್ಸೆಯ ಗುರಿಯನ್ನು ತಲುಪಿವೆ. ಆದರೆ ಕೆಲವು ವಾರ್ಡ್ ಗಳಲ್ಲಿ ನಾಯಿಗಳನ್ನು ಹಿಡಿಯುವಲ್ಲಿ ಅಥವಾ ಕಡಿತವನ್ನು ಕಡಿಮೆ ಮಾಡುವಲ್ಲಿ ಹೆಚ್ಚಿನ ಸವಾಲನ್ನು ಎದುರಿಸುತ್ತಿದ್ದೇವೆ. ಇಂತಹ ಪ್ರದೇಶಗಳಲ್ಲಿ ಬದಲಾವಣೆಯನ್ನು ತರಲು ಈ ಪ್ರದೇಶಗಳಿಗೆ ಆಹಾರ ನೀಡುವುದನ್ನು ಕೇಂದ್ರೀಕರಿಸಲಾಗಿದೆ. ಇದರ ಜೊತೆಗೆ, ಪ್ರಾಣಿಗಳ ಜನನ ನಿಯಂತ್ರಣ ಕಾರ್ಯಕ್ರಮವನ್ನು ನಿರಂತರವಾಗಿ ಮುಂದುವರಿಸುವುದು ಪಾಲಿಕೆಯ ಉದ್ದೇಶವಾಗಿದೆ. ಹಾಗೆಯೇ ಉಳಿದ ಪ್ರದೇಶಗಳಲ್ಲಿ ನಾಯಿಗಳಿಗೆ ಆಹಾರವನ್ನು ನೀಡುವ ಕಾರ್ಯವನ್ನು ಪ್ರಸ್ತುತ ಸಕ್ರಿಯವಾಗಿರುವ ಪ್ರಾಣೀಪ್ರಿಯ ಸ್ವಯಂಸೇವಕರು ನಿಭಾಯಿಸುತ್ತಾರೆ.
* ಒಟ್ಟು ಯೋಜನೆ ವೆಚ್ಚ 2.88 ಕೋಟಿ ರೂ.ಗಳಿದ್ದು, ಪ್ರತಿ ವಲಯದಲ್ಲಿ 100 ಆಹಾರ ಸ್ಥಳ, ಪ್ರತಿ ವಲಯದಲ್ಲಿಯೂ 500 ನಾಯಿಗಳಿಗೆ ದಿನಕ್ಕೆ ಒಂದು ಬಾರಿಯಂತೆ 365 ದಿನಗಳು ಆಹಾರ ನೀಡಲಾಗುತ್ತದೆ. ಈ ಲೆಕ್ಕಕ್ಕೆ ಪ್ರತಿ ನಾಯಿಗೆ ಪ್ರತಿದಿನ 19 ರೂ. ವೆಚ್ಚ ತಗಲುತ್ತದೆ (ತೆರಿಗೆ ಹೊರತುಪಡಿಸಿ). ಇದರಲ್ಲಿ:
ಎ) 8 ರೂ.: ದೈನಂದಿನ ಸಾರಿಗೆ, ಆಹಾರ ಪೂರೈಕೆ ಮತ್ತು ಸ್ಥಳ ಸ್ವಚ್ಛತೆಗೆ ತಗಲುವ ವೆಚ್ಚ
ಬಿ) 11 ರೂ.: ಆಹಾರಕ್ಕೆ ತಗಲುವ ವೆಚ್ಚ
ಈ ವಿವರಗಳೆಲ್ಲ ಮಾಧ್ಯಮದಲ್ಲಿ ಕೆಲ ವಾರಗಳ ಹಿಂದೆಯೇ ಪ್ರಕಟವಾಗಿವೆ. ಆದ್ದರಿಂದ ಇದನ್ನು ಹೊಸ ಲೆಕ್ಕಾಚಾರ ಅಥವಾ ತಿದ್ದಿದ ಲೆಕ್ಕವೆಂದು ಭಾವಿಸಬಾರದು.
* ಜನನ ನಿಯಂತ್ರಣ, ಲಸಿಕಾಕರಣ ಮತ್ತು ನಾಯಿ ಕಡಿತದ ವಿಷಯದಲ್ಲಿ ಬಿಬಿಎಂಪಿ ಈ ಕಾರ್ಯಕ್ರಮದ ಯಶಸ್ಸಿನ ಪ್ರಮಾಣದ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತದೆ ಮತ್ತು ಮುಂದಿನ ವರ್ಷದ ಅಂತಿಮ ಅವಲೋಕನದ ಆಧಾರದ ಮೇಲೆ ಈ ಯೋಜನೆಯ ಮುಂದುವರಿಕೆ ಅಥವಾ ಸ್ವರೂಪದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ.
* ನಾಯಿಗಳನ್ನು ಸ್ಥಳಾಂತರಿಸುವುದು ಅಥವಾ ನಾಯಿಗಳನ್ನು ಆಶ್ರಯಾಲಯದಲ್ಲಿ ಇಡುವುದನ್ನು ಕಾನೂನು ನಿರ್ಬಂಧಿಸಿದೆ. ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ (AWBI) ಪ್ರಕಟಿಸಿದ ಪಶು ಜನನ ನಿಯಂತ್ರಣ ಮಾರ್ಗಸೂಚಿಯಲ್ಲಿ ಈ ಕುರಿತು ಪೂರ್ಣವಾದ ವಿವರಣೆ ನೀಡಲಾಗಿದೆ.
* ಸಂತಾನಹರಣ ಶಸ್ತ್ರ ಚಿಕಿತ್ಸೆಯ ಪ್ರಮಾಣವನ್ನು ಹೆಚ್ಚಿಸಲು ಈ ಯೋಜನೆಯನ್ನು ನಡೆಸುವುದರಿಂದ ನಾಯಿಗಳ ಸಂಖ್ಯೆಯನ್ನು ನಿಯಂತ್ರಣದಲ್ಲಿಡಲು, ಪ್ರಾಣಿಗಳ ಜನನ ನಿಯಂತ್ರಣ ಮತ್ತು ಲಸಿಕೆ ಕಾರ್ಯಕ್ರಮಗಳನ್ನು ಬಿಬಿಎಂಪಿಯ ಆದ್ಯತೆಯಾಗಿ ಮುಂದುವರಿಸಲಾಗುವುದು.
* ಬಿಬಿಎಂಪಿಯ ಆಹಾರ ನೀಡುವ ಯೋಜನೆಯು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯಿಂದ ಬಿಡುಗಡೆಯಾದ ಪರಿಷ್ಕೃತ ಪ್ರಾಣಿ ಜನನ ನಿಯಂತ್ರಣ ಮಾರ್ಗಸೂಚಿ ಆಧರಿಸಿದೆ. ಮಾರ್ಗಸೂಚಿಯು ಸ್ಥಳೀಯ ಪ್ರಾಧಿಕಾರವು ಅನುಸರಿಸಬೇಕಾದ ಶಿಫಾರಸ್ಸುಗಳನ್ನು ಒಳಗೊಂಡಿದ್ದು, ಅದನ್ನೇ ಅನುಷ್ಠಾನಗೊಳಿಸಲಾಗುತ್ತಿದೆ.
* ನಾಯಿಗಳು ಮಾಂಸಾಹಾರಿ ಪ್ರಾಣಿಗಳಾಗಿದ್ದು, ಸಮತೋಲನ ಆಹಾರ ನೀಡುವ ನಿಟ್ಟಿನಲ್ಲಿ ಪ್ರೋಟೀನ್ ಅಂಶಕ್ಕಾಗಿ ಕೋಳಿಯ ಮಾಂಸವನ್ನು ಅಕ್ಕಿ ಮತ್ತು ತರಕಾರಿಗಳ ಜೊತೆ ಸೇರಿಸಿ ಬೇಯಿಸಿದ ಆಹಾರವನ್ನು ನೀಡಲಾಗುವುದು.
* ಟೆಂಡರ್‌ನಲ್ಲಿ ಆಹಾರದ ಅಂಗಾಂಶಗಳನ್ನು ಮಾತ್ರ ಪಟ್ಟಿ ಮಾಡಲಾಗಿದೆ. ಬಿರಿಯಾನಿ ಎನ್ನುವಂತಹ ಯಾವುದೇ ಪದವಿಲ್ಲ. ಇದು ನಾಯಿಗಳಿಗೆ ತಕ್ಕ ಹಾಗೆ, ಜೀರ್ಣಿಸಲು ಸರಿಯಾದ, ಸಮತೋಲನ ಆಹಾರವಾಗಿರುತ್ತದೆ. ತಜ್ಞ ಪಶುವೈದ್ಯರ ಸಲಹೆ ಮತ್ತು ಕಳೆದ ವರ್ಷ ಪ್ರಾರಂಭಿಸಿದ ಪ್ರಾಯೋಗಿಕ ಯೋಜನೆಯ ಅನುಭವದ ಆಧಾರದಲ್ಲಿ ಆಹಾರ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.
ಈ ಮೇಲ್ಕಂಡಂತೆ ಬೀದಿ ನಾಯಿಗಳಿಗೆ ಆಹಾರ ನೀಡುವ ಕುರಿತು ಪಶುಪಾಲನಾ ವಿಭಾಗದ ವಿಶೇಷ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್ ರವರು ಸ್ಪಷ್ಟೀಕರಣವನ್ನು ನಿಡಿರುತ್ತಾರೆ.
BIG NEWS: ‘ಸಿಗಂದೂರು ಸೇತುವೆ’ಗಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಯಡಿಯೂರಪ್ಪಗೆ ಬರೆದಿದ್ದ ಪತ್ರ ವೈರಲ್
Watch Video: ಇಂಗ್ಲೀಷ್ ಮೇಷ್ಟ್ರಾದ ಸಚಿವ ಡಾ.ಶರಣಪ್ರಕಾಶ ಪಾಟೀಲ: ವೀಡಿಯೋ ವೈರಲ್