ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಮಳೆಯ ಆರ್ಭಟ ಮುಂದುವರೆಯುವ ಲಕ್ಷಣ ಕಂಡುಬರುತ್ತಿದೆ. ಹಾಗಾಗಿ ಹವಾಮಾನ ಇಲಾಖೆ ಹಲವು ಜಿಲ್ಲೆಗಳಿಗೆ ಅಲರ್ಟ್ ಘೋಷಿಸಿದೆ. ಮುಖ್ಯವಾಗಿ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಿ ಹವಾಮಾನ ಇಲಾಖೆ ಘೋಷಣೆ ಮಾಡಿದೆ.
ಮುಂದಿನ ಮೂರ್ನಾಲ್ಕು ದಿನ ಕರಾವಳಿಯ ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಅತ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ನಿರಂತರ ಗಾಳಿಯ ವೇಗ ಪ್ರತಿ ಗಂಟೆಗೆ 30ರಿಂದ 40 ಕಿ.ಮೀ. ತಲುಪುಲಿದೆ. ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಗಾಳಿಯೊಂದಿಗೆ ಅತಿ ಹೆಚ್ಚು ವರ್ಷಧಾರೆ ಸುರಿಯಲಿದೆ.
ಹಾಗಾಗಿ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗೆ ಮುಂದಿನ 24 ಗಂಟೆಗಳಿಗೆ ಅನ್ವಯವಾಗುವಂತೆ ರೆಡ್ ಅಲರ್ಟ್ ಕೊಡಲಾಗಿದೆ. ಹಾಗೆಯೇ, ನಾಳೆ ಆರೆಂಜ್ ಮತ್ತು ತದನಂತರದ ಎರಡು ದಿನ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗೆ ಎರಡು ದಿನ ಆರೆಂಜ್ ಅಲರ್ಟ್, ನಂತರದ ಎರಡು ದಿನ ಯೆಲ್ಲೋ ಅಲರ್ಟ್ ನೀಡಲಾಗಿದೆ.ಉಳಿದಂತೆ, ಉತ್ತರ ಒಳನಾಡಿನ ಬೆಳಗಾವಿಗೆ ಕೂಡ ಎರಡು ದಿನ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ನಾಳೆ ಉಡುಪಿಯ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ
ದಕ್ಷಿಣ ಒಳನಾಡಿನಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದರಿಂದ, ಇದೀಗ ಉಡುಪಿ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿಯವರು ಇದೀಗ ಆದೇಶ ಹೊರಡಿಸಿದ್ದಾರೆ.