ಕೊಪ್ಪಳ: ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯ ಹಾಗೂ ರೊಟ್ಟಿ ಜಾತ್ರೆಯೆಂದೆ ಪ್ರಸಿದ್ಧವಾಗಿರುವ ಕೊಪ್ಪಳ ಜಿಲ್ಲೆಯ ಪ್ರಸಿದ್ಧ ಗವಿಸಿದ್ದೇಶ್ವರ ಜಾತ್ರೆಯ ಮಹಾದಾಸೋಹದಲ್ಲಿ 19 ದಿನಗಳಲ್ಲಿ ತರಕಾರಿ, ತುಪ್ಪ, ಹಾಲು, ಸಿಹಿಪದಾರ್ಥ, ಅಕ್ಕಿ ಸೇರಿದಂತೆ ಬರೋಬ್ಬರಿ 3179 ಕ್ವಿಂಟಲ್ ಆಹಾರ ಪದಾರ್ಥ ಬಳಕೆಯಾಗಿದೆ. ಇದು ಶ್ರೀಮಠವೇ ಬಿಡುಗಡೆ ಮಾಡಿದ ಪ್ರಕಟಣೆಯ ಲೆಕ್ಕಾಚಾರವಾಗಿದೆ ಎಂದು ತಿಳಿದುಬಂದಿದೆ.
ಇನ್ನು, ಭಕ್ತರು ತಾವೇ ಬಂದು ದಾಸೋಹದಲ್ಲಿ ಬಡಿಸಿದ್ದು, ಹೇಳದೇ ಕೊಟ್ಟು ಹೋಗಿದ್ದು ಲೆಕ್ಕವೇ ಇಲ್ಲ. ಜ.21ರಂದು ಆರಂಭವಾದ ದಾಸೋಹ, ಫೆ.9ರ ಮಧ್ಯರಾತ್ರಿಯವರೆಗೂ ನಡೆಯಿತು. ದಾಸೋಹದಲ್ಲಿ 16 ಲಕ್ಷ ರೊಟ್ಟಿ ಬಳಕೆಯಾಗಿದ್ದರೆ, 1200 ಕ್ವಿಂಟಲ್ ಅಕ್ಕಿಯ ಅನ್ನ ಮಾಡಿ ಹಾಕಲಾಗಿದೆ.
ಕಳೆದ ವರ್ಷ 750 ಕ್ವಿಂಟಲ್ ಅಕ್ಕಿ ಬಳಕೆಯಾಗಿದ್ದರೆ, ಈ ವರ್ಷ 450 ಕ್ವಿಂಟಲ್ ಅಕ್ಕಿಹೆಚ್ಚುವರಿಯಾಗಿ ಬಳಕೆಯಾಗಿದೆ. 10 ಲಕ್ಷ ಶೇಂಗಾ ಹೋಳಿಗೆ ಸೇರಿ 900 ಕ್ವಿಂಟಲ್ ಸಿಹಿ ಪದಾರ್ಥ ಖರ್ಚಾಗಿದೆ. ಇದರಲ್ಲಿ 300 ಕ್ವಿಂಟಲ್ ಮಾದಲಿ ಬಳಕೆಯಾಗಿದೆ.5 ಲಕ್ಷ ಮಿರ್ಚಿ ಬಜ್ಜಿ, 500 ಕೆಜಿ ಹಪ್ಪಳ ಬಡಿಸಲಾಗಿದೆ. 400 ಕ್ವಿಂಟಲ್ ತರಕಾರಿ, 350 ಕ್ವಿಂಟಲ್ ದ್ವಿದಳ ಧಾನ್ಯವನ್ನು ಸಾಂಬಾರ್ ಮತ್ತು ಪಲ್ಯ ಮಾಡಲು ಬಳಕೆ ಮಾಡಲಾಗಿದೆ.
ದಾಸೋಹ ದಲ್ಲಿ ನಿತ್ಯ ಲಕ್ಷ, ಲಕ್ಷ ಭಕ್ತರು ಪ್ರಸಾದ ಸ್ವೀಕರಿಸಿದ್ದಾರೆ. ರಥೋತ್ಸವದ ದಿನ, ನಂತರದ ಎರಡು ದಿನ ಸೇರಿ ಬರೋಬ್ಬರಿ 5-6 ಲಕ್ಷ ಭಕ್ತರು ಪ್ರಸಾದ ಸ್ವೀಕರಿಸಿದ್ದಾರೆ. ಒಟ್ಟಾರೆ 15-18 ಲಕ್ಷ ಭಕ್ತರು ಪ್ರಸಾದ ಸ್ವೀಕರಿಸಿದ್ದಾರೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.