ಚಿತ್ರದುರ್ಗ : ಈಗಾಗಲೇ ಕನ್ನಡ ಮಾಧ್ಯಮದಲ್ಲಿ ಕಲಿತ ಅಭ್ಯರ್ಥಿಗಳಿಗೆ ನೇಮಕಾತಿಯಲ್ಲಿ ಶೇ.5ರಷ್ಟು ಇರುವ ಮೀಸಲಾತಿಯನ್ನು ಶೇ. 10ಕ್ಕೆ ಏರಿಸಲು ರಾಜ್ಯ ಸರಕಾರಕ್ಕೆ ಶಿಫಾರಸು ಮಾಡುವುದಾಗಿ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ.ಮರುಷೋತ್ತಮ ಬಿಳಿಮಲೆ ತಿಳಿಸಿದರು.
ಸರಕಾರಿ ಹಾಗೂ ಖಾಸಗಿ ವಲಯಗಳ ಉದ್ಯೋಗದಲ್ಲಿ ಕನ್ನಡಿಗರ ಪ್ರಾತಿನಿಧ್ಯ ಕಡಿಮೆಯಾಗಿದೆ. ಎಸ್ಎಸ್‌ಎಲ್‌ಸಿ ವರೆಗೆ ಕನ್ನಡ ಭಾಷೆಯಲ್ಲಿ ಓದಿದವರಿಗೆ ರಾಜ್ಯ ಸರಕಾರಿ ನೇಮಕಾತಿಗಳಲ್ಲಿ ಈಗಿರುವ ಶೇ.5ರಷ್ಟು ಮೀಸಲನ್ನು ಶೇ. 10ಕ್ಕೆ ಏರಿಸಿದರೆ ಕನ್ನಡಿಗರಿಗೆ ಉದ್ಯೋಗಾವಕಾಶಗಳು ಹೆಚ್ಚಾಗಲಿವೆ. ಸರಕಾರ ನಾನಾ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ನಡೆಯುವ ನೇಮಕಾತಿಯಲ್ಲೂ ಕನ್ನಡ ಮಾಧ್ಯಮದಲ್ಲಿ ಕಲಿತ ಅಭ್ಯರ್ಥಿಗಳಿಗೆ ಆದ್ಯತೆ ನೀಡುವಂತೆ ಶಿಫಾರಸು ಮಾಡಲಾಗುವುದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ-2022ಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಈ ಕಾಯಿದೆಗೆ ನಿಯಮಗಳ ರಚನೆ ಕುರಿತು ಫೆ.11ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ನಿಯಮಗಳು ರಚನೆಯಾದರೆ ಕನ್ನಡವನ್ನು ಸರಿಯಾಗಿ ಅನುಷ್ಠಾನಗೊಳಿಸದ ಅಧಿಕಾರಿಗಳ ವಿರುದ್ಧ ದಂಡ, ವರ್ಗಾವಣೆ ಸೇರಿದಂತೆ ಶಿಸ್ತು ಕ್ರಮ ಕೈಗೊಳ್ಳಲು ಪ್ರಾಧಿ ಕಾರಕ್ಕೆ ಅವಕಾಶ ಸಿಗಲಿದೆ ಎಂದರು.








