ಬೆಂಗಳೂರು: ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಭೈರವೈಕ್ಯ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮಿಗಳವರಿಗೆ ಮರಣೋತ್ತರವಾಗಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಶಾಸಕರಾದ ಶರತ್ ಬಚ್ಚೇಗೌಡ ಮತ್ತು ದಿನೇಶ್ ಗೂಳಿಗೌಡ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಜಂಟಿ ಪತ್ರ ಬರೆದಿರುವ ಅವರು, ಶ್ರೀಗಳವರ ಸಾಮಾಜಿಕ, ಶೈಕ್ಷಣಿಕ ಹಾಗೂ ಆಧ್ಯಾತ್ಮಿಕ ಕೊಡುಗೆಗಳನ್ನು ಸ್ಮರಿಸಿದ್ದಾರೆ.
ಪತ್ರದ ಮುಖ್ಯಾಂಶಗಳು:
-
ಶಿಕ್ಷಣ ಕ್ರಾಂತಿ: ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗಾಗಿ 500ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ.
-
ಆರೋಗ್ಯ ಸೇವೆ: ಅತ್ಯಾಧುನಿಕ ವೈದ್ಯಕೀಯ ಸೌಲಭ್ಯವುಳ್ಳ ಆಸ್ಪತ್ರೆಗಳನ್ನು ನಿರ್ಮಿಸಿ ಜನಸಾಮಾನ್ಯರಿಗೆ ಆರೋಗ್ಯ ಸೇವೆ ಲಭ್ಯವಾಗುವಂತೆ ಮಾಡಿದ್ದಾರೆ.
-
ಆಧ್ಯಾತ್ಮಿಕ ಚಿಂತನೆ: 60ಕ್ಕೂ ಹೆಚ್ಚು ವೇದ, ಆಗಮ ಪಾಠಶಾಲೆಗಳ ಮೂಲಕ ಸನಾತನ ಸಂಸ್ಕೃತಿಯನ್ನು ರಕ್ಷಿಸಿದ್ದಾರೆ.
-
ಅಪ್ರತಿಮ ಸಾಧನೆ: ಮುನ್ನೂರು ವರ್ಷಗಳಲ್ಲಿ ಮಾಡಬಹುದಾದ ಕಾರ್ಯಗಳನ್ನು ಕೇವಲ 33 ವರ್ಷಗಳಲ್ಲಿ ಸಾಧಿಸಿದ “ಯುಗ ಯೋಗಿ” ಇವರು ಎಂದು ಶ್ಲಾಘಿಸಿದ್ದಾರೆ.
ಪ್ರಧಾನಿ ಭೇಟಿ ವೇಳೆ ಪ್ರಸ್ತಾಪಿಸಲು ಕೋರಿಕೆ:
ಏಪ್ರಿಲ್ 15ರಂದು ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಕ್ಷೇತ್ರಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭೇಟಿ ನೀಡುತ್ತಿದ್ದು, ಈ ಸಂದರ್ಭದಲ್ಲಿ ಭೈರವೈಕ್ಯ ಮಂದಿರವನ್ನು ಉದ್ಘಾಟಿಸಲಿದ್ದಾರೆ. ಈ ಮಹತ್ವದ ಸಂದರ್ಭದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರುಗಳು ಮತ್ತು ರಾಜ್ಯ ಸರ್ಕಾರವು ಶ್ರೀಗಳಿಗೆ ‘ಭಾರತ ರತ್ನ’ ನೀಡುವ ಕುರಿತು ಪ್ರಧಾನಿಯವರ ಗಮನ ಸೆಳೆಯಬೇಕು ಎಂದು ಶಾಸಕರು ಮನವಿಯಲ್ಲಿ ತಿಳಿಸಿದ್ದಾರೆ.
“ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ಮತ್ತು ಆರೋಗ್ಯ ತಲುಪಿಸಿದ ಶ್ರೀಗಳವರ ಸೇವೆಗೆ ‘ಭಾರತ ರತ್ನ’ ಗೌರವ ಸಲ್ಲುವುದು ಸಮಸ್ತ ಕನ್ನಡಿಗರಿಗೆ ಸಲ್ಲುವ ಗೌರವವಾಗಿದೆ,” ಎಂದು ಕೆಇಓನಿಕ್ಸ್ (KEONICS) ಅಧ್ಯಕ್ಷ ಶರತ್ ಬಚ್ಚೇಗೌಡ ಹಾಗೂ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಅಭಿಪ್ರಾಯಪಟ್ಟಿದ್ದಾರೆ.
ನೂರಕ್ಕೂ ಹೆಚ್ಚು ದೇಶಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನ ಆಚರಣೆ; ಮದ್ದೂರು ಶಾಸಕ ಕೆ.ಎಂ.ಉದಯ್








