ತಿರುವನಂತಪುರಂ : ವಯನಾಡು ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ಸದ್ಯಕ್ಕೆ ಬಂದಿರುವ ಮಾಹಿತಿ ಪ್ರಕಾರ 2,38,935 ಮತಗಳನ್ನು ಪಡೆದಿದ್ದು, 1 ಲಕ್ಷ 75 ಸಾವಿರಕ್ಕೂ ಅಧಿಕ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಬಹುತೇಕ ಸಮೀಕ್ಷೆಗಳೆಲ್ಲ ಪ್ರಿಯಾಂಕಾ ಅವರ ಗೆಲುವಿನ ಭವಿಷ್ಯ ನುಡಿದಿದ್ದು, ಅದರಂತೆ ಅವರು ಆರಂಭಿಕ ಮುನ್ನಡೆ ಸಾಧಿಸಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಭದ್ರಕೋಟೆ ಎನಿಸಿಕೊಂಡಿರುವ ಉತ್ತರ ಪ್ರದೇಶದ ರಾಯ್ ಬರೇಲಿ ಮತ್ತು ವಯನಾಡು ಎರಡೂ ಕಡೆ ರಾಹುಲ್ ಗಾಂಧಿ 3 ಲಕ್ಷಕ್ಕೂ ಅಧಿಕ ಮತಗಳಿಂದ ಜಯಭೇರಿ ಭಾರಿಸಿದ್ದರು. ಕೊನೆಗೆ ಅನಿವಾರ್ಯವಾಗಿ ವಯನಾಡು ಕ್ಷೇತ್ರಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಹೀಗಾಗಿ ಇಲ್ಲಿ ಉಪ ಚುನಾವಣೆ ಘೋಷಿಸಲಾಗಿತ್ತು. ನ. 13ರಂದು ಇಲ್ಲಿ ಮತದಾನ ನಡೆದಿತ್ತು.
ಕಾಂಗ್ರೆಸ್ ಭದ್ರಕೋಟೆಯಾಗಿದ್ದರೂ ಇಲ್ಲಿ ಈ ಬಾರಿ ಜಿದ್ದಾಜಿದ್ದಿನ ಹೋರಾಟ ನಡೆದಿದೆ. ಸುಮಾರು 16 ಮಂದಿ ಕಣದಲ್ಲಿದ್ದು, ಈ ಪೈಕಿ ಕಾಂಗ್ರೆಸ್ ನೇತೃತ್ವದ ಯುಡಿಎಫ್, ಸಿಪಿಐ ನೇತೃತ್ವದ ಎಲ್‌ಡಿಎಫ್ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ನಡುವೆ ನೇರಾನೇರ ಸ್ಪರ್ಧೆ ಏರ್ಪಟ್ಟಿದೆ. ಯುಡಿಎಫ್‌ನಿಂದ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧಿಸಿದರೆ, ಎಲ್‌ಡಿಎಫ್‌ನಿಂದ ಸತ್ಯನ್ ಮೊಕೇರಿ ಕಣದಲ್ಲಿದ್ದಾರೆ, ಇವರಿಗೆ ಎನ್‌ಡಿಎಯ ನವ್ಯಾ ಹರಿದಾಸ್ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ.