ಬೆಂಗಳೂರು : ರಾಜ್ಯದ ಗ್ರಾಮಪಂಚಾಯಿತಿ `ಆಸ್ತಿ’ಗಳ ನಕ್ಷೆ ರೂಪಿಸಲು ಯೋಜನೆ ಸಿದ್ದವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಗ್ರಾಮ ಪಂಚಾಯತಿಗಳಿಗೆ ಹೆಚ್ಚಿನ ಸಂಪನ್ಮೂಲಗಳನ್ನು ಕ್ರೂಡೀಕರಿಸಲು ಚಿಂತಿಸಲಾಗಿದ್ದು ಈ ನಿಟ್ಟಿನಲ್ಲಿ ನಿನ್ನೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಶೀಲಿಸಿದ್ದಾರೆ.
ಗ್ರಾಮ ಪಂಚಾಯತಿಗಳಿಗೆ ಸಂಪೂರ್ಣವಾಗಿ ಸ್ವತಂತ್ರವಾಗಿ ಆಡಳಿತ ನಡೆಸುವಂತೆ ಆರ್ಥಿಕ ಶಕ್ತಿ ತಂದುಕೊಡಲು ಉದ್ದೇಶಿಸಲಾಗಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಪಂಚಾಯತಿ ಆಸ್ತಿಗಳ ನಕ್ಷೆ ರೂಪಿಸುವ ಮೂಲಕ ಉದ್ದೇಶಿತ ಯೋಜನೆಯನ್ನು ಸಾಕಾರಗೊಳಿಸುವಲ್ಲಿ ಕಾರ್ಯತತ್ಪರ ರಾಗುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪ್ರಾಯೋಗಿಕವಾಗಿ ಕೆಲವು ಗ್ರಾಮ ಪಂಚಾಯತಿಗಳೇ ಅಲ್ಲದೆ, ತಾಲೂಕು ಹಾಗೂ ಜಿಲ್ಲಾ ಪಂಚಾಯತಿಗಳನ್ನು ಆರಿಸಿಕೊಂಡು, ಆಸ್ತಿಗಳ ನಕ್ಷೆಕಾರ್ಯ ಕೈಗೆತ್ತಿಕೊಳ್ಳುವಂತೆ ತಿಳಿಸಿ, ಪ್ರವಾಸಿ ಕೇಂದ್ರಗಳನ್ನು ಕೇಂದ್ರೀಕರಿಸಿ ಅಂತಹ ಸ್ಥಳಗಳಲ್ಲಿ ಲಭ್ಯವಿರುವ ಪ್ರಮುಖ ಆಸ್ತಿಗಳನ್ನು ವಾಣಿಜ್ಯಾತ್ಮಕವಾಗಿ ಬಳಸಿಕೊಳ್ಳುವ ಮೂಲಕ ಸ್ಥಳೀಯ ಆಡಳಿತಗಳ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಬಹುದೆಂದು ಸಲಹೆ ನೀಡಿದ್ದಾರೆ.