ಬೆಂಗಳೂರು: 545 ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳನ್ನು (ಪಿಎಸ್ ಐ) ನೇಮಕ ಮಾಡಿಕೊಳ್ಳಲು ಹೊಸದಾಗಿ ಪರೀಕ್ಷೆ ನಡೆಸಬೇಕೆಂಬ ಸರ್ಕಾರದ ಆದೇಶದ ಮೇಲಿನ ತಡೆಯಾಜ್ಞೆಯನ್ನು ಹೈಕೋರ್ಟ್ ಸೋಮವಾರ ಮತ್ತೆ ವಿಸ್ತರಿಸಿದೆ.
ಈ ತಡೆಯಾಜ್ಞೆಯನ್ನು ಅಕ್ಟೋಬರ್ 19 ರವರೆಗೆ ವಿಸ್ತರಣೆ ಮಾಡಲಾಗಿದ್ದು, ವಿಸ್ತರಣಾ ದಿನಾಂಕ ಮುಗಿದ ದಿನಾಂಕದ ಬಳಿಕ ನ್ಯಾಯಾಲಯವು ಅರ್ಜಿಗಳ ವಿಚಾರಣೆಯನ್ನು ಮುಂದುವರಿಸುತ್ತದೆ. ಈ ಪ್ರಕರಣವನ್ನು ಆದ್ಯತೆಯ ಮೇರೆಗೆ ವಿಚಾರಣೆ ನಡೆಸಲಾಗುವುದು ಎಂದು ವಿಭಾಗೀಯ ಪೀಠ ಹೇಳಿದೆ. ಈ ವರ್ಷದ ಆರಂಭದಲ್ಲಿ ನೇಮಕಾತಿ ಹಗರಣ ಭುಗಿಲೆದ್ದ ನಂತರ, ಸರ್ಕಾರವು ಏಪ್ರಿಲ್ 29 ರಂದು ಪರೀಕ್ಷೆಗಳನ್ನು ರದ್ದುಗೊಳಿಸಿತು ಮತ್ತು ಮರು ಪರೀಕ್ಷೆಗಳನ್ನು ನಡೆಸುವುದಾಗಿ ಘೋಷಿಸಿತು.
ಇದರ ವಿರುದ್ಧ ಆಯ್ಕೆಯಾದ ಕೆಲವು ಅಭ್ಯರ್ಥಿಗಳು ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ)ಯನ್ನು ಸಂಪರ್ಕಿಸಿದರು. ಆದಾಗ್ಯೂ, ಕೆಎಟಿ ಅವರ ಮನವಿಯನ್ನು ತಿರಸ್ಕರಿಸಿತ್ತು. ನಂತರ ಅಭ್ಯರ್ಥಿಗಳು ಕೆಎಟಿ ಆದೇಶದ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದರು, ಇದೇ ವೇಳೆ ಪ್ರಾಮಾಣಿಕವಾಗಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಕೆಲವರನ್ನು ಒಳಗೊಂಡ ಹಗರಣಕ್ಕಾಗಿ ದಂಡ ವಿಧಿಸಬಾರದು ಎಂದು ನ್ಯಾಯಪೀಠದ ಮುಂದೆ ಮನವಿ ಮಾಡಿಕೊಂಡಿದ್ದಾರೆ.