ಬೆಂಗಳೂರು : ರಾಜ್ಯದಲ್ಲಿ ಭಾರಿ ಸದ್ದು ಮಾಡಿದ್ದ PSI ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕೋರ್ಟ್ ಆದೇಶದ ಮೇರೆಗೆ ಇಂದು 545 ಪಿಎಸ್ಐ ನೇರ ನೇಮಕಾತಿ ಸಂಬಂಧ ಮಂಗಳವಾರ ಮರುಪರೀಕ್ಷೆ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ವು ಸಕಲ ಸಿದ್ಧತೆ ಮಾಡಿಕೊಂಡಿದೆ. ಕಳೆದ ಬಾರಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು.
ಈ ವೇಳೆ ಕೆಲ ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ಎಸಗಿ ಭಾರೀ ಅವ್ಯವಹಾರ ನಡೆದಿತ್ತು.ಹೀಗಾಗಿ ಪ್ರಾಧಿಕಾರವು ಈ ಬಾರಿ ಕೇವಲ ಬೆಂಗಳೂರು ನಗರದ 117 ಪರೀಕ್ಷಾ ಕೇಂದ್ರಗಳಲ್ಲಿ ಮಾತ್ರ ಮರು ಪರೀಕ್ಷೆನಡೆಸಲು ಮುಂದಾಗಿದೆ. ಒಟ್ಟು 54 ಸಾವಿರ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಬೆಳಗ್ಗೆ 10.30ರಿಂದ ಮಧ್ಯಾಹ್ನ 12ರವರೆಗೆ ಮೊದಲ ಪೇಪರ್ ಮತ್ತು ಮಧ್ಯಾಹ್ನ 1ರಿಂದ 2.30ರವರೆಗೆ ಎರಡನೇ ಪೇಪರ್ಗೆ ಲಿಖಿತ ಪರೀಕ್ಷೆ ನಡೆಯಲಿದೆ.
ಪ್ರತೀ ಪರೀಕ್ಷಾ ಕೇಂದ್ರದಲ್ಲೂ ನಾಲ್ವರು ಸಶಸ್ತ್ರ ಪೇದೆಗಳು ಮತ್ತು ಇಬ್ಬರು ಮಹಿಳಾ ಸಿಬ್ಬಂದಿ ಸೇರಿದಂತೆ ಒಟ್ಟು 6 ಮಂದಿಯನ್ನು ಭದ್ರತ್ರೆಗೆ ನಿಯೋಜಿಸಲಾಗಿದೆ. ಪರೀಕ್ಷಾ ಕರ್ತವ್ಯಕ್ಕೆ 40 ಬೆಟಾಲಿಯನ್ ಪೊಲೀಸರನ್ನು ನಿಯೋಜಿಸಲಾಗಿದೆ.ಸುಸೂತ್ರ ಹಾಗೂ ದೋಷರಹಿತವಾಗಿ ಪರೀಕ್ಷೆ ನಡೆಸುವ ದೃಷ್ಟಿಯಿಂದ ಪರೀಕ್ಷಾ ಕೇಂದ್ರಗಳ ಸುತ್ತಲ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಆದೇಶಿಸಿದ್ದಾರೆ. ಪರೀಕ್ಷಾ ಕೇಂದ್ರಗಳ ಸುತ್ತಲಿನ ಜೆರಾಕ್ಸ್ ಅಂಗಡಿ ಮುಚ್ಚುವಂತೆ ಆದೇಶದಲ್ಲಿ ಸೂಚಿಸಲಾಗಿದೆ.
ಈ ಹಿಂದೆ ಪೊಲೀಸ್ ನೇಮಕಾತಿ ವಿಭಾಗದಿಂದ 545 ಪಿಎಸ್ಐ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಸಿ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿತ್ತು. ಆದರೆ, ಈ ಪರೀಕ್ಷೆಯಲ್ಲಿ ಅವ್ಯವಹಾರ ನಡೆದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸರ್ಕಾರ ಸಿಐಡಿ ತನಿಖೆಗೆ ಪ್ರಕರಣವನ್ನು ವಹಿಸಿತ್ತು. ಸಿಐಡಿ ತನಿಖೆಯಲ್ಲಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿ ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪಾಲ್ ಸೇರಿದಂತೆ ನೂರಕ್ಕೂ ಅಧಿಕ ಮಂದಿ ಬಂಧನವಾಗಿತ್ತು.
ಹೀಗಾಗಿ ಸರ್ಕಾರ ಆ ತಾತ್ಕಾಲಿಕ ಆಯ್ಕೆ ಪಟ್ಟಿ ರದ್ದುಗೊಳಿಸಿ ಮರುಪರೀಕ್ಷೆ ನಡೆಸುವುದಾಗಿ ಘೋಷಿಸಿತ್ತು.ಹೈಕೋರ್ಟ್ ಸಹ ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದಿತ್ತು. ಪೊಲೀಸ್ ಇಲಾಖೆ ಹೊರತುಪಡಿಸಿ ಪ್ರತ್ಯೇಕ ಸಂಸ್ಥೆಯಿಂದ ಪರೀಕ್ಷೆ ನಡೆಸುವಂತೆ ಸೂಚಿಸಿತ್ತು. ಅದರಂತೆ ಇದೀಗ ಸರ್ಕಾರದ ಸೂಚನೆ ಮೇರೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮರುಪರೀಕ್ಷೆ ನಡೆಸುತ್ತಿದೆ.
ಲೋಹ ಶೋಧಕ ಯಂತ್ರದಲ್ಲಿ ತಪಾಸಣೆ : ಪರೀಕ್ಷೆಯಲ್ಲಿ ಯಾವುದೇ ಅಕ್ರಮಕ್ಕೆ ಆಸ್ಪದ ನೀಡದಿರಲು ಪರೀಕ್ಷಾ ಕೇಂದ್ರಗಳ ಸುತ್ತ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಪೊಲೀಸರು ಪರೀಕ್ಷಾ ಕೇಂದ್ರ ಕೇಂದ್ರಗಳ ಸುತ್ತ ಅನುಮಾನಾಸ್ಪದವಾಗಿ ಓಡಾಡುವವರು, ಗಾಳಿಸುದ್ದಿ ಹಬ್ಬಿಸುವ ಕಿಡಿಗೇಡಿಗಳು ಮತ್ತು ಜೆರಾಕ್ಸ್ ಅಂಗಡಿಗಳ ಮೇಲೆ ಹದ್ದಿನ ಕಣ್ಣಿಡಲಿದ್ದಾರೆ. ಪರೀಕ್ಷೆಗೆ ಹಾಜರಾಗುವ ಪ್ರತಿಯೊಬ್ಬರನ್ನೂ ಲೋಹಶೋಧಕ ಯಂತ್ರದ ಮೂಲಕ ತಪಾಸಣೆ ನಡೆಸಲಾಗುತ್ತದೆ.
ಪರೀಕ್ಷಾ ಕೇಂದ್ರದೊಳಗೆ ಎಲೆಕ್ಟ್ರಾನಿಕ್ಸ್ ಸಾಧನಗಳು, ಮೊಬೈಲ್ ತರುವುದನ್ನು ನಿಷೇಧಿಸಲಾಗಿದೆ. ಮಹಿಳಾ ಅಭ್ಯರ್ಥಿಗಳು ಮಾಂಗಲ್ಯ ಸೂತ್ರ ಮತ್ತು ಕಾಲುಂಗರ ಹೊರತುಪಡಿಸಿ ಬೇರೆ ಯಾವುದೇ ಆಭರಣಗಳನ್ನು ಧರಿಸಿ ಬರಲು ಅವಕಾಶವಿಲ್ಲ.