ಧರ್ಮಶಾಲಾ : ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಇಂದು, ಐಪಿಎಲ್ 2024 ರ 58 ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸುತ್ತಿದೆ. ಈ ಪಂದ್ಯ ಧರ್ಮಶಾಲಾದ ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.
ಆದರೆ ಈ ಒಂದು ಪಂದ್ಯಕ್ಕೆ ವರುಣ ಕಾಟ ಕೊಟ್ಟಿದ್ದು, ಇದೀಗ ಧರ್ಮಶಾಲಾದ ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ಮಳೆಯಾಗುತ್ತಿದ್ದು, ಪಂದ್ಯವನ್ನು ಸ್ಥಗಿತಗೊಳಿಸಲಾಗಿದೆ. ಸದ್ಯ ಆರ್‌ಸಿಬಿ 10 ಓವರ್ ಗಳಿಗೆ 119 ರನ್ ಗಳಿಸಿದೆ.
ಈಗಾಗಲೇ ಆರ್‌ಸಿಬಿ ಪ್ರಮುಖ 3 ವಿಕೆಟ್ಗಳನ್ನು ಕಳೆದುಕೊಂಡಿದ್ದು, ಆರ್ ಸಿ ಬಿ ತಂಡದ ನಾಯಕ ಫ್ಯಾಫ್ ಡುಪ್ಲೆಸಿ, ವೀಲ್ ಜಾಕ್ಸ್ ಹಾಗೂ ರಜತ್ ಪಾಟೀದಾರ್ ಅವರ ವಿಕೆಟ್ಗಳನ್ನು ಕಳೆದುಕೊಂಡಿದೆ. ಆದರೆ ರಜತ್ ಪಾಟಿದಾರವರು ಕೇವಲ 23 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 3 ಬೌಂಡ್ರಿ ಚಚ್ಚಿ 55 ರನ್ನುಗಳನ್ನು ಬಾರಿಸಿ, ಸ್ಯಾಮ್ ಕರ್ರಂಗೆ ವಿಕೆಟ್ ಒಪ್ಪಿಸಿದರು.
ಇದಕ್ಕೂ ಮುನ್ನ ಪಂಜಾಬ್ ತಂಡದ ವೇಗದ ಬೌಲರ್ ಕಾವೇರಪ್ಪ ಆರ್ ಸಿ ಬಿ ನಾಯಕ ಡು ಪ್ಲೇಸಿ (9) ಹಾಗೂ ವೀಲ್ ಜಾಕ್ಸ (12) ಅವರ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಸದ್ಯ ವಿರಾಟ್ ಕೊಹ್ಲಿ ಅವರು 42 ರನ್ ಬಾರಿಸಿ ಕ್ರೀಸ್ ನಲ್ಲಿ ಇದ್ದಾರೆ. ಒಂದು ವೇಳೆ ಪಂದ್ಯ ರದ್ದಾದರೆ, ಡಕ್ವರ್ತ್ ಲೂಯಿಸ್ ನಿಯಮದ ಮೇಲೆ ಯಾವ ತಂಡ ವಿಜಯಶಾಲಿಯಾಗಲಿದೆ ಎಂದು ಘೋಷಿಸಲಾಗುತ್ತದೆ.