ಬೆಂಗಳೂರು : ತೀವ್ರ ಆಯಾಸ, ಕುಂಠಿತ ಬೆಳವಣಿಗೆ ಮತ್ತು ಪುನರಾವರ್ತಿತ ಮೂತ್ರದ ಸೋಂಕಿನ ಲಕ್ಷಣಗಳನ್ನು ಹೊಂದಿದ್ದ ಯೆಮೆನ್‌ನ 14 ವರ್ಷದ ಬಾಲಕನೊಬ್ಬನಿಗೆ ಅತ್ಯಂತ ಸಂಕೀರ್ಣವಾಗಿದ್ದ ಆರೋಗ್ಯ ಸ್ಥಿತಿ ನಡುವೆಯೂ ಸ್ಪರ್ಶ್ ಯಶವಂತಪುರ ಆಸ್ಪತ್ರೆ ವೈದ್ಯರು ಯಶಸ್ವಿ ಕಿಡ್ನಿ ಕಸಿ ಮಾಡುವ ಮೂಲಕ ಆತನಿಗೆ ಮರು ಜೀವ ಮತ್ತು ಜೀವನವನ್ನು ನೀಡಿದ್ದಾರೆ.
ಬಾಲಕನ ಪರಿಸ್ಥಿತಿಯನ್ನು ಕಂಡು ತೀವ್ರ ಆತಂಕಗೊಳಗಾಗಿದ್ದ ಯೆಮೆನ್ ದೇಶದ ಪೋಷಕರು ಕುಟುಂಬದ ಸ್ನೇಹಿತರೊಬ್ಬರ ಸಲಹೆಯ ಮೇರೆಗೆ ಸ್ಪರ್ಶ್ ಯಶವಂತಪುರ ಆಸ್ಪತ್ರೆಯನ್ನು ಸಂಪರ್ಕಿಸಿದ್ದರು. ವೈದ್ಯಕೀಯ ತನಿಖೆಗಳು ಗಂಭೀರವಾದ ಮೂತ್ರ ಕೋಶ ಸಮಸ್ಯೆ ಇರುವುದನ್ನು ದೃಢಪಡಿಸಿದವು – ವೆಸಿಕೌರೆಟೆರಲ್ ರಿಫ್ಲಕ್ಸ್ (VUR), ಮೂತ್ರವು ಮೂತ್ರಕೋಶದಿಂದ ಮೂತ್ರಪಿಂಡಗಳಿಗೆ ಹಿಮ್ಮುಖವಾಗಿ ಹರಿಯುವ ಸ್ಥಿತಿ, ಇದಾಗಿದ್ದು ಸುಧಾರಿಸಲಾಗದ ಮೂತ್ರಪಿಂಡದ ಹಾನಿಗೆ ಕಾರಣವಾಗುತ್ತದೆ.
ಸ್ಪರ್ಶ್ ಆಸ್ಪತ್ರೆಗೆ ಬಾಲಕನನ್ನು ಚಿಕಿತ್ಸೆಗೆಂದು ಕರೆ ತಂದ ಸಂದರ್ಭದಲ್ಲಿ ಆತನ ಪರಿಸ್ಥಿತಿ ಅತ್ಯಂತ ಕ್ಲಿಷ್ಟಕರವಾಗಿತ್ತು. ವೈದ್ಯರಿಗೆ ಈತನಿಗೆ ಚಿಕಿತ್ಸೆ ನೀಡುವುದೇ ಬಹುದೊಡ್ಡ ಸವಾಲಾಗಿತ್ತು. ಮೂತ್ರ ಪಿಂಡ ಕಸಿ ಹೊರತಾಗಿ ಅನ್ಯ ಮಾರ್ಗಗಳಿರಲಿಲ್ಲ. ಇಂಗ್ಲಿಷ್ ಭಾಷೆಯನ್ನೂ ಅರಿಯದ ಈ ಯೆಮೆನಿ ಕುಟುಂಬಕ್ಕೆ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಡುವುದೂ ಕೂಡಾ ಅತ್ಯಂತ ದೊಡ್ಡ ಸವಾಲಾಗಿತ್ತು. ಈ ಸಂದರ್ಭದಲ್ಲಿ ಸಮಾನಾಂತರ ಭಾಷಾಂತರಕಾರರ ಸಹಾಯದೊಂದಿಗೆ ಪರಿಸ್ಥಿತಿಯನ್ನು ಕುರಿತು ತಿಳುವಳಿಕೆ ಮೂಡಿಸಿದ ವೈದ್ಯರು ಚಿಕಿತ್ಸೆ ಆರಂಭಿಸಿದರು.
ದೀರ್ಘಾವಧಿಯ ವೆಸಿಕೌರೆಟೆರಲ್ ರಿಫ್ಲಕ್ಸ್ (VUR)ನಿಂದಾಗಿ ಬಾಲಕನ ಕಿಡ್ನಿಗಳೆರಡೂ ವಿಫಲವಾಗಿರುವುದು ಮೊದಲಿಗೆ ಪತ್ತೆ ಮಾಡಿದ ವೈದ್ಯರು ಸಂಕೀರ್ಣವಾದ ಶಸ್ತ್ರ ಚಿಕಿತ್ಸೆಗೆ ತಜ್ಞ ಶಸ್ತ್ರ ಚಿಕಿತ್ಸಕರು ಮತ್ತು ವೈದ್ಯರ ತಂಡ ರಚಿಸಿ ಮೂತ್ರ ಪಿಂಡ ಕಸಿಗೆ ಮುಂದಾದರು. ಆದರೆ ಮೂತ್ರ ಪಿಂಡ ಕಸಿ ಅಷ್ಟು ಸುಲಭವಾಗಿರಲಿಲ್ಲ. ಸ್ವತ: ಬಾಲಕನ ತಾಯಿಯೇ (೩೯ ವರ್ಷ) ಮೂತ್ರ ಪಿಂಡ ದಾನಕ್ಕೆ ಮುಂದಾದರೂ ಅವರು ಈಗಾಗಲೇ ಬೆನ್ನು ಮೂಳೆಯ ಗಂಭೀರ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದುದರಿಂದ ಅವರ ಕಿಡ್ನಿಗಳನ್ನು ತೆಗೆದು ಕಸಿ ಮಾಡುವುದೂ ಕೂಡ ಬಹುದೊಡ್ಡ ಸವಾಲಾಗಿತ್ತು.
“ಇದೊಂದು ಅತ್ಯಂತ ಕಠಿಣ ಸವಾಲಾಗಿತ್ತು. ಬಾಲಕನ ಕ್ಷೀಣಗೊಂಡ ಬೆಳವಣಿಗೆ, ಮೂಳೆಗಳ ಅಸಹಜ ಬೆಳವಣಿಗೆಯಿಂದಾದ ವೈಕಲ್ಯಗಳು ಜೊತೆಗೆ ಕಿಡ್ನಿ ದಾನಿಯು ಮೊದಲೇ ಒಳಗಾಗಿದ್ದ ಶಸ್ತ್ರ ಚಿಕಿತ್ಸೆ ಮೊದಲಾದ ಬಹು ಹಂತದ ಸವಾಲುಗಳನ್ನು ಎದುರಿಸಬೇಕಾಗಿತ್ತು. ಡಯಾಲಿಸಿಸ್‌ಗೂ ಮುನ್ನ ಕಸಿ ಮಾಡುವ ನಮ್ಮ ನಿರ್ಧಾರವು ಬಾಲಕನು ಶೀಘ್ರ ಸಹಜ ಸ್ಥಿತಿಗೆ ಮರಳುವುದರ ಜೊತೆಗೆ ಬಾಲಕನ ಮುಂದಿನ ದಿನಗಳಲ್ಲಿ ಎಲ್ಲರಂತೆ ಕಾರ್ಯ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಗುವಂತೆ ಮಾಡಿತು” ಎಂದು ಹಿರಿಯ ಮೂತ್ರಪಿಂಡ ಶಾಸ್ತ್ರಜ್ಞ ಮತ್ತು ಕಿಡ್ನಿ ಕಸಿ ಚಿಕಿತ್ಸಕ ಡಾ.ಅರುಣ್ ಕುಮಾರ್ ಎನ್ ತಿಳಿಸಿದರು. ಹಿರಿಯ ಸಮಾಲೋಚಕ ಮತ್ತು ಶಸ್ತ್ರ ಚಿಕಿತ್ಸಕ ಮೂತ್ರ ಕೋಶ ಮತ್ತು ಮೂತ್ರಪಿಂಡ ಕಸಿ ತಜ್ಞ ಡಾ. ಪ್ರಶಾಂತ್ ಗಣೇಶ್ ಈ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆ ನಡೆಸಿದ್ದರು.
ರಸ್ತೆ ಅಗಲೀಕರಣ ಕಾಮಗಾರಿ ಹಿನ್ನಲೆ: ನಾಳೆ ಸಾಗರ ನಗರದ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut
BIG BREAKING: ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಗಲ್ಲು ಶಿಕ್ಷೆ | Sheikh Hasina Verdict








