ಬೆಳಗಾವಿ: ಅಪ್ರಾಪ್ತ ವಯಸ್ಸಿನ ದಿವ್ಯಾಂಗ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಗೆ 40 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ಒಂದೂವರೆ ಲಕ್ಷ ರೂಪಾಯಿ ದಂಡ ವಿಧಿಸಿ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಶೇಷ ತ್ವರಿತ ಪೋಕ್ಸೋ ನ್ಯಾಯಾಲಯ ಬುಧವಾರ ತೀರ್ಪು ಪ್ರಕಟಿಸಿದೆ.
ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಿ.ಎಮ್. ಪುಷ್ಪಲತಾ ಅವರು ಒಟ್ಟು 8 ಸಾಕ್ಷಿಗಳ ವಿಚಾರಣೆ ಮಾಡಿ, 58 ದಾಖಲೆಗಳು, 7 ಮುದ್ದೆಮಾಲುಗಳ ಆಧಾರದ ಮೇಲಿಂದ ಆರೋಪಿ ಧರೇಪ್ಪ ಖನಸೆ ಮೇಲಿನ ಆಪಾದನೆ ಸಾಬೀತಾಗಿದೆ ಎಂದು ತೀರ್ಪು ನೀಡಿದ್ದರು.
ಜೊತೆಗೆ ಆರೋಪಿತನಿಗೆ ಕಲಂ: 6 ಪೋಕ್ಸೋ ಕಾಯ್ದೆ-2012 ರಡಿ 30 ವರ್ಷಗಳ ಕಾರಾಗೃಹ ಶಿಕ್ಷೆ ಮತ್ತು ಒಂದು ಲಕ್ಷ ರೂ. ದಂಡ ಮತ್ತು ದಂಡದ ಮೊತ್ತ ತುಂಬಲು ತಪ್ಪಿದಲ್ಲಿ 2 ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ, ಹಾಗೂ ಕಲಂ 3(1) (w) (i) (ii), 3(2)(v) ಎಸ್ಸಿ/ಎಸ್ಟಿ ಸೆಕ್ಷನ್ ಅಡಿಯಲ್ಲಿ 10 ವರ್ಷ ಕಾರಾಗೃಹ ಶಿಕ್ಷೆ, 50 ಸಾವಿರ ರೂ. ದಂಡ ಮತ್ತು ದಂಡ ತುಂಬಲು ತಪ್ಪಿದಲ್ಲಿ 1 ವರ್ಷದ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
ಪ್ರಕರಣ ಹಿನ್ನೆಲೆ?
ಹುಕ್ಕೇರಿ ತಾಲೂಕಿನ ಗ್ರಾಮವೊಂದರ ಧರೆಪ್ಪಾ (ಧೀರಜ) ಅಂಗತ ಖನಸೆ(25) ಶಿಕ್ಷೆಗೆ ಒಳಗಾದ ಆರೋಪಿ. 2025ರ ಆಗಸ್ಟ್ 25ರಂದು ಅಪ್ರಾಪ್ತ ವಿಶೇಷಚೇತನ ಬಾಲಕಿ ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ನೋಡಿಕೊಂಡು, ಮನೆಯ ಹೊರಗೆ ಕಟ್ಟೆಯ ಮೇಲೆ ಕುಳಿತಿದ್ದ ಅಪ್ರಾಪ್ತೆಯನ್ನು ಮನೆಯ ಒಳಗೆ ಎಳೆದೊಯ್ದು ಆರೋಪಿ ಅತ್ಯಾಚಾರ ಎಸಗಿದ್ದ ಆರೋಪ ಕೇಳಿಬಂದಿತ್ತು.
ಈ ಸಂಬಂಧ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿ ಮಹಾಂತೇಶ ಹೊಸಪೇಟಿ ತನಿಖೆ ಕೈಗೊಂಡು, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಶೇಷ ತ್ವರಿತ ಪೋಕ್ಸೋ ನ್ಯಾಯಾಲಯ-01ಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು. ಅಮೀರ ನದಾಫ ತನಿಖಾ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿದ್ದರು.








