ರಾಮನಗರ : ನಗರದ ತಾಲೂಕು ಕಚೇರಿಯಲ್ಲಿನ ಚುನಾವಣಾ ಶಾಖೆ ಕಚೇರಿಯಲ್ಲಿ ಶುಕ್ರವಾರ ಫ್ಯಾನ್‌ಗೆ ನೇಣು ಬಿಗಿದುಕೊಂಡು ನೌಕರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೇಲಧಿಕಾರಿ ಕಿರುಕುಳಕ್ಕೆ ಮನನೊಂದು ಈ ಕೃತ್ಯ ಮಾಡಿಕೊಂಡಿರುವುದಾಗಿ ಬರೆದ ಡೆತ್‌ನೋಟ್ ಪೊಲೀಸರಿಗೆ ದೊರೆತಿದೆ.
ಚನ್ನಪಟ್ಟಣ ತಾಲೂಕಿನ ತವಕನಹಳ್ಳಿಯ ಸುರೇಶ್ (50) ಮೃತ. ಒಂದು ವಾರದಿಂದ ಶಿರಸ್ತೇದಾರ್ ಪೂರ್ಣಿಮಾ ಅವರೊಂದಿಗೆ ನಡೆಯುತ್ತಿದ್ದ ಮುಸುಕಿನ ಗುದ್ದಾಟದಿಂದ ಬೇಸತ್ತ ಸುರೇಶ್, ಬೆಳಗ್ಗೆ 10.30ಕ್ಕೆ ಕಚೇರಿ ಬಾಗಿಲು ಹಾಕಿಕೊಂಡು ಫ್ಯಾನ್‌ಗೆ ವಯರ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೃತರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ. ಸಂಜೆ 4:30 ಆದರೂ ಬಾಗಿಲು ತೆರೆಯದ ಹಿನ್ನೆಲೆ ತಹಸೀಲ್ದಾರ್ ಮತ್ತು ಇತರ ಅಧಿಕಾರಿಗಳು ಬಾಗಿಲು ತೆಗೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಪಕ್ಕದಲ್ಲಿಯೇ ಎರಡೂವರೆ ಪುಟದ ಡೆತ್‌ನೋಟ್ ಬರೆದಿಟ್ಟು ಅದರಲ್ಲಿ ಶಿರಸ್ತೇದಾರ್ ಪೂರ್ಣಿಮಾ ಅವರ ಕಿರುಕುಳ, ಮಾನಸಿಕ ಒತ್ತಡ ಹಾಗೂ ಅವಮಾನಗಳಿಂದ ಕೆಲಸ ನಿರ್ವಹಿಸಲು ಆಗುತ್ತಿಲ್ಲ ಎಂದು ಬರೆದಿಟ್ಟಿದ್ದಾರೆ.
ಹಿರಿಯ ಅಧಿಕಾರಿಗಳ ಭೇಟಿ: ರಾಮನಗರ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಎ.ಎಸ್.ಪಿ. ಲಕ್ಷ್ಮೀನಾರಾಯಣ್, ಡಿವೈಎಸ್‌ಪಿ ಗಿರಿ, ಪೊಲೀಸ್ ಇನ್‌ಸ್ಪೆಪೆಕ್ಟರ್ ಮಿಥುನ್ ಶಿಲ್ಪಿ, ತಹಸೀಲ್ದಾರ್ ಸ್ಮಿತಾರಾಮ್ ಪರಿಶೀಲಿಸಿದರು. ಶಿರಸ್ತೇದಾರ್ ಪೂರ್ಣಿಮಾ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.