ಬೆಂಗಳೂರು: ರಾಜ್ಯಸಭೆ ಚುನಾವಣೆಯ ಅಂತಿಮ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ನ ಅಜಯ್ ಮಾಕೇನ್ -47, ನಾಸೀರ್ ಹುಸೇನ್ – 47, ಜಿ.ಸಿ. ಚಂದ್ರಶೇಖರ – 45 ಮತಗಳೊಂದಿಗೆ ಗೆಲುವು ಸಾಧಿಸಿದರೆ, ಬಿಜೆಪಿಯ ನಾರಾಯಣಸಾ ಭಾಂಡಗೆ 47 ಮತಗಳನ್ನ ಪಡೆದುಕೊಳ್ಳುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ. ಇನ್ನು ಐದನೇ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕುಪೇಂದ್ರ ರೆಡ್ಡಿ ಅವರಿಗೆ 36 ಮತಗಳು ಬಿದ್ದಿವೆ. ಇನ್ನು ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿ 9 ಮತಗಳಿಂದ ಸೋಲನುಭವಿಸಿದ್ದಾರೆ.
ಉತ್ತರ ಪ್ರದೇಶದ 10, ಮಹಾರಾಷ್ಟ್ರ 6, ಬಿಹಾರ 6, ಪಶ್ಚಿಮ ಬಂಗಾಳ 5, ಮಧ್ಯ ಪ್ರದೇಶ 5, ಗುಜರಾತ್ 4, ಆಂಧ್ರ ಪ್ರದೇಶ 3, ತೆಲಂಗಾಣ 3, ರಾಜಸ್ಥಾನ 3, ಕರ್ನಾಟಕ 4, ಉತ್ತರಾಖಂಡ 1, ಛತ್ತೀಸ್‌ಗಢ 1, ಒಡಿಶಾ 3, ಹರ್ಯಾಣ 1 ಹಾಗೂ ಹಿಮಾಚಲ ಪ್ರದೇಶದಲ್ಲಿ 1 ಸ್ಥಾನಕ್ಕೆ ಚುನಾವಣೆ ನಡೆದಿದೆ.
ಈ ನಡುವೆ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಅವರು ಕಾಂಗ್ರೆಸ್ ಪರವಾಗಿ ಅಡ್ಡ ಮತದಾನ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಧಾನಸಭೆಯ ಬಿಜೆಪಿ ಮುಖ್ಯ ಸಚೇತಕ ದೊಡ್ಡನಗೌಡ ಜಿ.ಪಾಟೀಲ್, ಈ ಬಗ್ಗೆ ಪಕ್ಷ ತನಿಖೆ ನಡೆಸಲಿದೆ ಎಂದು ಹೇಳಿದ್ದಾರೆ. ದೊಡ್ಡನಗೌಡ ಜಿ.ಪಾಟೀಲ್ ಮಾತನಾಡಿ, ಬಿಜೆಪಿ ಶಾಸಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಎಸ್.ಟಿ.ಸೋಮಶೇಖರ್ ಅಡ್ಡ ಮತದಾನ ಮಾಡಿರುವುದು ದೃಢಪಟ್ಟಿದೆ. ಏನು ಮಾಡಬಹುದು ಮತ್ತು ಯಾವ ಕ್ರಮ ತೆಗೆದುಕೊಳ್ಳಬೇಕು ಎಂದು ನಾವು ಚರ್ಚಿಸುತ್ತಿದ್ದೇವೆ” ಎಂದು ಅವರು ಹೇಳಿದರು. ಮತ ಚಲಾಯಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ಟಿ.ಸೋಮಶೇಖರ್, “ನನ್ನ ಕ್ಷೇತ್ರದ ನೀರು ಮತ್ತು ಇತರ ನಿರ್ವಹಣೆಗೆ ಅವರು ಹಣ ನೀಡುತ್ತಾರೆ ಎಂಬ ಭರವಸೆ ನೀಡುವವರ ಪರವಾಗಿ ನಾನು ಮತ ಚಲಾಯಿಸುತ್ತೇನೆ” ಎಂದು ಹೇಳಿದರು.