ಬೆಂಗಳೂರು: ರಾಜ್ಯದ ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಕಳೆದ 24 ಗಂಟೆಗಳಲ್ಲಿ ಹಗುರ ಮಳೆಯಾಗಿದ್ದು, ಸುಡುವ ಬಿಸಿಲಿನಿಂದ ಕಂಗಾಲಾಗಿದ್ದ ಜನರಿಗೆ ತುಸು ನೆಮ್ಮದಿ ಸಿಕ್ಕಿದೆ. ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಆಲಿಕಲ್ಲು ಮಳೆಯಾಗಿದ್ದರೆ, ಬೆಳಗಾವಿಯ ಹಿಕ್ಕೇರಿಯಲ್ಲಿ 2 ಸೆಂ.ಮೀ ಹಾಗೂ ಗುಂಡ್ಲುಪೇಟೆಯಲ್ಲಿ 1 ಸೆಂ.ಮೀ ಮಳೆಯಾದ ವರದಿಯಾಗಿದೆ.
ಇನ್ನೂ ಎರಡು ದಿನ ಮಳೆ ಮುಂದುವರಿಕೆ: ವಿಜಯ ಕರ್ನಾಟಕದೊಂದಿಗೆ ಮಾತನಾಡಿದ ಬೆಂಗಳೂರು ಹವಾಮಾನ ಇಲಾಖೆ ಕೇಂದ್ರದ ನಿರ್ದೇಶಕರಾದ ಸಿ.ಎಸ್. ಪಾಟೀಲ್ ಅವರು, “ಮಾರ್ಚ್ 20 ಮತ್ತು 21ರಂದು ಕರಾವಳಿ ಸೇರಿದಂತೆ ರಾಜ್ಯದ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ” ಎಂದು ತಿಳಿಸಿದ್ದಾರೆ.
ಬೆಂಗಳೂರು ಹವಾಮಾನ: ರಾಜಧಾನಿ ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಕಳೆದ ಎರಡು ಮೂರು ದಿನಗಳಿಂದ ನಗರದ ಹಲವೆಡೆ ಮಳೆಯಾಗುತ್ತಿದ್ದು, ವಾತಾವರಣ ತಂಪಾಗಿದೆ. ಮುಂದಿನ ಎರಡು ದಿನಗಳ ಕಾಲ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದ್ದು, ಗರಿಷ್ಠ ತಾಪಮಾನ 31°C ಹಾಗೂ ಕನಿಷ್ಠ ತಾಪಮಾನ 19°C ದಾಖಲಾಗುವ ಸಂಭವವಿದೆ.
ಎಲ್ಲೆಲ್ಲಿ ಮಳೆ?
-
ಉತ್ತರ ಒಳನಾಡು: ಬೀದರ್, ಕಲಬುರ್ಗಿ, ವಿಜಯಪುರ, ಬಾಗಲಕೋಟೆ, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ.
-
ದಕ್ಷಿಣ ಒಳನಾಡು: ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ದಾವಣಗೆರೆ, ಬಳ್ಳಾರಿ, ವಿಜಯನಗರ, ಬೆಂಗಳೂರು (ನಗರ ಹಾಗೂ ಗ್ರಾಮೀಣ), ಕೋಲಾರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಹಗುರ ಮಳೆಯಾಗಬಹುದು.
-
ಭಾನುವಾರದ ಮುನ್ಸೂಚನೆ: ಕೊಡಗು, ಮೈಸೂರು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಾತ್ರ ಮಳೆಯಾಗುವ ಸಾಧ್ಯತೆಯಿದ್ದು, ಉಳಿದ ಕಡೆ ಒಣ ಹವೆ ಇರಲಿದೆ.
ಮಾರ್ಚ್ 24ರ ನಂತರ ಬಿಸಿಲ ಪ್ರಖರತೆ: ಸೋಮವಾರದಿಂದ ಮಳೆ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದ್ದು, ಮಾರ್ಚ್ 24ರ ನಂತರ ರಾಜ್ಯಾದ್ಯಂತ ಉಷ್ಣಾಂಶ ಗಣನೀಯವಾಗಿ ಏರಿಕೆಯಾಗಲಿದೆ. ಬಿಸಿಲಿನ ಪ್ರಖರತೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ.
ದೇಶದಲ್ಲೊಂದು ಅಮಾನವೀಯ ಕೃತ್ಯ: 6 ವರ್ಷದ ಮೊಮ್ಮಗಳ ಮೇಲೆ ಅತ್ಯಾಚಾರ ಎಸಗಿದ ಕಾಮುಕ ಅಜ್ಜ
BREAKING : ಉಪಚುನಾವಣೆ ಕಾವು : ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ತಾಯಿಯೊಂದಿಗೆ ಬಂದು ನಾಮಪತ್ರ ಸಲ್ಲಿಸಿದ ಸಮರ್ಥ








