ಕೆಎನ್ಎನ್ ಡಿಜಿಟಲ್ ಡೆಸ್ಕ್ : ಒಂದೆಡೆ ಮೈ ನಡುಗುವ ಚಳಿ ..ಮತ್ತೊಂದೆಡೆ ಜಿಟಿಜಿಟಿ ಮಳೆ ಶುರುವಾಗಿದೆ. ಸಾಮಾನ್ಯವಾಗಿ ಹೆಚ್ಚಿನವರಿಗೆ ಜ್ವರ ಶೀತ ಹಾಗೂ ಕೆಮ್ಮಿನ ಸಮಸ್ಯೆ ಅತಿಯಾಗಿ ಕಾಡುತ್ತದೆ. ಬದಲಾಗುತ್ತಿರುವ ಹವಾಮಾನದಿಂದ ಈ ಸಮಯದಲ್ಲಿ ಆರೋಗ್ಯದಲ್ಲಿ ಏರುಪೇರಾಗುವುದು ಸಾಮಾನ್ಯ.
ಆದರೆ ಪ್ರತಿ ಬಾರಿ ಶೀತ, ಕೆಮ್ಮು ಗಂಟಲು ನೋವು ಇಂತಹ ಸಮಸ್ಯೆಗಳಿಗೆ ವೈದ್ಯರ ಬಳಿ ಹೋಗುವುದಕ್ಕಿಂತ ಮನೆಯಲ್ಲಿಯೇ ಕೆಲವು ಪರಿಹಾರಗಳನ್ನು ಕಂಡುಕೊಳ್ಳಬೇಕು. ಹಾಗೆ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಕೂಡ ಮಾಡಬೇಕು. ಇದರಿಂದ ದೇಹಕ್ಕೆ ಅಡ್ಡಪರಿಣಾಮಗಳು ಎದುರಾಗುವ ಸಾಧ್ಯತೆಯೂ ಬಹಳ ಕಡಿಮೆ. ಇಂದಿನ ಈ ಲೇಖನದಲ್ಲಿ ಗಂಟಲು ನೋವು ಮತ್ತು ಕೆಮ್ಮಿನ ಸಮಸ್ಯೆಗೆ ಪರಿಹಾರಗಳನ್ನು ಕಂಡುಕೊಳ್ಳುವ ಬಗ್ಗೆ ತಿಳಿಯೋಣ.
ನಿಂಬೆ ಹಣ್ಣಿನ ಚಹಾ : ನಮ್ಮ ಹಿರಿಯರ ಕಾಲದಿಂದಲೂ ಶೀತದ ಸಮಸ್ಯೆಯ ಪರಿಹಾರಕ್ಕೆ ನಿಂಬೆಹಣ್ಣಿನ ಚಹಾ ಪರಿಹಾರವಾಗಿ ಕೆಲಸ ಮಾಡುತ್ತಾ ಬಂದಿದೆ.
ಒಲೆಯ ಮೇಲೆ ಒಂದು ಲೋಟ ನೀರನ್ನು ಕುದಿಯಲು ಇಟ್ಟು ಅದಕ್ಕೆ ಸ್ವಲ್ಪ ಅಂದರೆ ಅರ್ಧ ಹೋಳು ನಿಂಬೆ ಹಣ್ಣಿನ ರಸ ಹಿಂಡಿ ಚಹ ತಯಾರು ಮಾಡಿ ಕುಡಿದು ಅತ್ಯಂತ ಸುಲಭವಾಗಿ ನೆಗಡಿ ಹಾಗೂ ಕೆಮ್ಮನ್ನು ಪರಿಹಾರ ಮಾಡಿಕೊಳ್ಳಬಹುದು.
ಏಕೆಂದರೆ ನಿಂಬೆ ಹಣ್ಣಿನ ರಸದಲ್ಲಿ ವಿಟಮಿನ್ ಸಿ ಅಂಶದ ಪ್ರಮಾಣ ತುಂಬಾ ಹೆಚ್ಚಾಗಿ ಕಂಡುಬರುತ್ತದೆ. ಇದು ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವಲ್ಲಿ ಪ್ರಮುಖ ಪಾತ್ರ ಬೀರುತ್ತದೆ. ಹಾಗಾಗಿ ತಕ್ಷಣದಲ್ಲಿ ಶೀತದಿಂದ ಹದಗೆಟ್ಟ ಆರೋಗ್ಯದಲ್ಲಿ ಒಳ್ಳೆಯ ಬದಲಾವಣೆ ಕಂಡುಬರುತ್ತದೆ.
ಗ್ರೀನ್ ಟೀ : ಬಹಳ ಜನರಿಗೆ ಇದೊಂದು ಆರೋಗ್ಯಕರವಾದ ಆಯ್ಕೆ ಮತ್ತು ದಿನ ನಿತ್ಯದ ಪಾನೀಯ ಎಂದು ಹೇಳಬಹುದು. ಗ್ರೀನ್ ಟೀ ನಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳ ಪ್ರಮಾಣ ಹೆಚ್ಚಾಗಿ ಕಂಡು ಬರುತ್ತದೆ.
ಸೋಂಕುಗಳ ನಿವಾರಣೆಗೆ ಹಾಗೂ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಮೆಟಬಾಲಿಸಂ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಅನುಕೂಲವಾಗುವಂತೆ ಇದು ಸಹಾಯ ಮಾಡುತ್ತದೆ.
ಶುಂಠಿ ಚಹಾ
ಶುಂಠಿ ಚಹಾ ತನ್ನಲ್ಲಿ ದೇಹದ ಉಷ್ಣಾಂಶವನ್ನು ಕಾಪಾಡುವ ಗುಣ ಸ್ವಭಾವವನ್ನು ಹೊಂದಿದೆ. ಇದು ಮೂಗಿನ ಭಾಗದ ಕಟ್ಟುವಿಕೆಯನ್ನು ನಿವಾರಣೆ ಮಾಡಿ ಎದೆ ಕಟ್ಟುವಿಕೆ ಸಮಸ್ಯೆಯನ್ನು ಸಹ ಪರಿಹಾರ ಮಾಡುತ್ತದೆ. ಇದರಂತೆ ಹಲವಾರು ಶೀತದ ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ.
ಪ್ರತಿದಿನ ಕುಡಿಯುವ ಮಾಮೂಲಿ ಚಹಾಗೆ ಹಾಲನ್ನು ಬೆರೆಸದೆ ಹಾಗೆ ಕುಡಿಯುವುದರಿಂದ ಕೂಡ ಶೀತದ ಸಮಸ್ಯೆಗಳಿಂದ ಮುಕ್ತಿ ಪಡೆದುಕೊಳ್ಳಬಹುದು.
ತುಳಸಿ ಎಲೆಗಳ ಚಹಾ
ತುಳಸಿ ಎಲೆ, ಶುಂಠಿ ಮತ್ತು ಕರಿಮೆಣಸಿನೊಂದಿಗೆ ಚಹಾ ಕುಡಿಯುವುದರಿಂದ ಕೆಮ್ಮು ಮತ್ತು ಶೀತದಲ್ಲಿ ತ್ವರಿತ ಪರಿಹಾರ ಸಿಗುತ್ತದೆ. ತುಳಸಿ-ಶುಂಠಿ ರಸದಲ್ಲಿ ಜೇನುತುಪ್ಪವನ್ನು ಬೆರೆಸಿ ಬೆಳಿಗ್ಗೆ ಮತ್ತು ಸಂಜೆ ಸೇವಿಸುವುದರಿಂದ ಕೆಮ್ಮು ಗುಣವಾಗುತ್ತದೆ. ದೇಹವು ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಸಹ ಅಭಿವೃದ್ಧಿಪಡಿಸುತ್ತದೆ. ಕೆಮ್ಮಿನ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಿಗೆ ಜಾಯಿಕಾಯಿ ಮತ್ತು ಒಣ ಶುಂಠಿಯನ್ನು ದೇಸಿ ತುಪ್ಪದಲ್ಲಿ ಪುಡಿ ಮಾಡಿ ಸೇವಿಸಿ.
ನೆಲ್ಲಿಕಾಯಿ ರಸದ ಕಷಾಯವನ್ನು ಸೇವಿಸಿ
ಕೆಮ್ಮು,ಗಂಟಲು ನೋವು ಮತ್ತು ಜ್ವರ ಬಂದಾಗ, ನೆಲ್ಲಿಕಾಯಿ ರಸದ ಕಷಾಯವನ್ನು ಕುಡಿಯಬೇಕು. ನೆಲ್ಲಿಕಾಯಿಯಲ್ಲಿರುವ ಆಂಟಿ-ಆಕ್ಸಿಡೆಂಟ್ಗಳು ದೇಹದ ಪ್ರತಿರಕ್ಷೆಯನ್ನು ಹೆಚ್ಚಿಸುತ್ತವೆ. ಅಲ್ಲದೆ, ಇದರಲ್ಲಿರುವ ವಿಟಮಿನ್ ಸಿ ದೇಹದ ರಕ್ತ ಪರಿಚಲನೆ ಸುಧಾರಿಸುತ್ತದೆ.