ಬೆಂಗಳೂರು : ರಾಜ್ಯದ ಹಲವೆಡೆ ಈಗಾಗಲೇ ಭಾರಿ ಮಳೆ ಸುರಿಯುತ್ತಿದ್ದು, ದಕ್ಷಿಣ ಹಾಗೂ ಉತ್ತರ ಕರ್ನಾಟಕ ಬಳಿಕ ಘಟ್ಟಪ್ರದೇಶಗಳಲ್ಲಿ ಸೆ.16ರಿಂದ ಬಿರುಸಾಗಿ ಮಳೆ ಸುರಿಯುವ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆ ಎಚ್ಚರಿಸಿದೆ. ರಾಯಚೂರು, ಕಲಬುರಗಿ, ಯಾದಗಿರಿ, ಕೊಪ್ಪಳ, ಬೀದರ್, ವಿಜಯಪುರ, ಬೀದರ್ ಸೇರಿ ರಾಜ್ಯದ ವಿವಿಧ ಸ್ಥಳಗಳಲ್ಲಿ ಶುಕ್ರವಾರ ಮಿಂಚು, ಬಿರುಗಾಳಿ ಸಹಿತ ವರ್ಷಧಾರೆಯಾಯಿತು.
ಬಾಗಲಕೋಟೆ, ಕಲಬುರಗಿ, ವಿಜಯಪುರದಲ್ಲಿ ಮುಂದಿನ 3 ದಿನ, ಬೀದರ್, ರಾಯಚೂರು, ಯಾದಗಿರಿ, ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ತುಮಕೂರಿನಲ್ಲಿ ಸೆ.13ರಂದು ಜೋರು ಮಳೆ ಬೀಳುವ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಕೊಡಲಾಗಿದೆ. ಬೆಳಗಾವಿಯಲ್ಲಿ ಸೆ.14ರಿಂದ 2 ದಿನ, ಬೆಂಗಳೂರು ನಗರ, ಬೆಂ. ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ರಾಮನಗರದಲ್ಲಿ ಸೆ.16, 17ರಂದು ಯೆಲ್ಲೋ ಅಲರ್ಟ್ ನೀಡಲಾಗಿದೆ. ಇದೇ ವೇಳೆ ದೇಶದಲ್ಲಿ ಈ ಬಾರಿಯ ಮಾನ್ಸೂನ್ ಸೆ.15 ರ ಬಳಿಕ ಕ್ಷೀಣಗೊಳ್ಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.