ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಅರಬ್ಬೀ ಸಮುದ್ರ ಹಾಗೂ ಬಂಗಾಳ ಕೊಲ್ಲಿಯಲ್ಲಿ ಸುಳಿಗಾಳಿ ಸೃಷ್ಟಿಯಾಗಿರುವ ಪರಿಣಾಮ ಹಿನ್ನೆಲೆ ಚಾಮರಾಜನಗರ ಜಿಲ್ಲಾದ್ಯಂತ ಭಾರಿ ಮಳೆ ಆಗುತ್ತಿದ್ದು ಭಾನುವಾರ ರಾತ್ರಿ ಹಾಗೂ ಮುಂಜಾನೆ ತನಕವೂ ನಿರಂತರವಾಗಿ ಸುರಿದ ಮಳೆಯಿಂದಾಗಿ ಹಲವು ಗ್ರಾಮಗಳು ಜಲಾವೃತವಾಗಿದೆ. ಮನೆಗಳಿಗೆ ನೀರು ನುಗ್ಗಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ.
ಚಾಮರಾಜನಗರ ಪಟ್ಟಣದ ನಾಯಕರ ಬೀದಿಯಲ್ಲಿ ಇಂದು ಕುಮಾರ್ ಎಂಬುವವರಿಗೆ ಸೇರಿದ ನಾಡಹೆಂಚಿನ ಮನೆಯೊಂದು ಕುಸಿದಿದ್ದು, ಅದೃಷ್ಟವಶಾತ್ ಮನೆಯವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಳೆಗೆ ಚಾಮರಾನಗರದ ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದವು. ಹಲವು ಕಡೆಗಳಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಅಲ್ಲದೇ ಬಿ.ರಾಚಯ್ಯ ಜೋಡಿರಸ್ತೆಯು ಸಂಪೂರ್ಣ ಜಲಾವೃತಗೊಂಡು ಸಂಚಾರಕ್ಕೆ ತೊಡಕುಂಟಾಯಿತು. ಅಲ್ಲದೇ ಮಳೆಯ ನೀರು ಬಿ.ರಾಚಯ್ಯ ಜೋಡಿರಸ್ತೆಯಲ್ಲಿರುವ ಇಂದಿರಾಕ್ಯಾಂಟೀನ್ಗೆ ನುಗ್ಗಿ ಅವಾಂತರ ಸೃಷ್ಟಿಸಿತು.
ಚಾಮರಾಜನಗರ ತಾಲೂಕಿನ ಮಂಗಲ ಗ್ರಾಮದ ಬಳಿ ಇರುವ ಯಡಿಯೂರು ಗ್ರಾಮ ಜಲಾವೃತಗೊಂಡಿದೆ ಯಡಿಯೂರು ಗ್ರಾಮದ ಚರಂಡಿಗಳು ರಸ್ತೆಗಳು ಮಳೆಯ ನೀರು ತುಂಬಿ ನಂದಿಯಂತೆ ಹರಿಯುತ್ತಿದ್ದು ಗ್ರಾಮಸ್ಥರು ಪರದಾಟ ಪಡುತ್ತಿದ್ದರು. ಬಸಪ್ಪನ ಪಾಳ್ಯ. ಕಾಲುವೆ ಹೊಡೆದು ಗ್ರಾಮಕ್ಕೆ ನೀರು ನುಗ್ಗಿದ ಪರಿಣಾಮ ಜಲಾವೃತಗೊಂಡ ಕೆಲವರ ಮನೆಯಲ್ಲಿದ್ದ ದವಸದಾನ್ಯಗಳು ನೀರಿನಲ್ಲಿ ಕೊಚ್ಚಿ ಹೋದವು. ಹೆಬ್ಬಸೂರು ಗ್ರಾಮದಲ್ಲಿ ರೈತನೊರ್ವ ಮರದಿಂದ ಕೀಳಿಸಿ ಇಟ್ಟಿದ್ದ ತೆಂಗಿನಕಾಯಿಗಳೆಲ್ಲ ನೀರು ಪಾಲಾದವು.
ಚಾಮರಾಜನಗರದಲ್ಲಿ ಭಾನುವಾರ ರಾತ್ರಿಯಿಂದ ಆರಂಭಗೊಂಡ ಮಳೆ ಜಿಲ್ಲೆಯ ಬಹುತೇಕ ಕಡೆ ಒಂದೇ ಸಮನೆ ಮುಂಜಾನೆ ತನಕ ಸುರಿಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮಳೆ ಬಿಡುವು ಕೊಡದ ಹಿನ್ನೆಲೆಯಲ್ಲಿ ಸೋಮವಾರ 1ನೇ ತರಗತಿಯಿಂದ ಪದವಿ ಕಾಲೇಜಿನವರೆಗೆ ಡಿಸಿ ಚಾರುಲತಾ ಸೋಮಲ್ ರಜೆ ಘೋಷಿಸಿದರು.
ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ಗಿರಿ ಶ್ರೇಣಿಯ ಶೇಣಿ ತಪ್ಪಲಲ್ಲಿರುವ ಗುಂಬಳ್ಳಿ ಗ್ರಾಮದ ಕೃಷ್ಣನಯ್ಯ ಕಟ್ಟೆ ಚೆಕ್ ಡ್ಯಾಮ್ ಹಲವು ವರ್ಷಗಳ ನಂತರ ತುಂಬಿ ಕೋಡಿ ಬಿದ್ದಿದ್ದು ಜನರು ಮಳೆಯನ್ನೂ ಲೆಕ್ಕಿಸದೇ ಕೋಡಿ ನೋಡಲು ಮುಗಿಬಿದ್ದಿದ್ದರು.ಬಿಳಿಗಿರಿ ಬನದೊಳಗೆ ಕಾಣುವ ಕೆರೆಕಟ್ಟೆಗಳು ತುಂಬಿ ರಸ್ತೆಯುದ್ದಕ್ಕೂ ನೀರು ಹರಿಯುತ್ತಿದ್ದವು.ಗುಂಡ್ಲುಪೇಟೆ ಕಲ್ಯಾಣ ಮಂಟಪದ ಭೋಜನಾಲಯಕ್ಕೆ ಮಳೆ ನೀರು ನುಗ್ಗಿ ಸಮಾರಂಭಕ್ಕೆ ಅಡ್ಡಿಪಡಿಸಿದೆ. ಊಟ ಮಾಡುವ ವೇಳೆ ಭೋಜನಾಲಯ, ಅಡುಗೆ ಕೋಣೆಗೆ ನೀರು ನುಗ್ಗಿ ಫಜೀತಿ ಉಂಟು ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.